ನವದೆಹಲಿ: ಪೆಗಾಸೆಸ್ ಕಣ್ಗಾವಲು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಲಾಗಿರುವ ಪಿಐಎಲ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಮ್ ಕೋರ್ಟ್ ಕೇಂದ್ರ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು 10 ದಿನದೊಳಗೆ ಉತ್ತರಿಸುವಂತೆ ಒಕ್ಕೂಟ ಸರಕಾರಕ್ಕೆ ನೋಟೀಸು ನೀಡಿತು. ಮಂಗಳವಾರ ಪೆಗಾಸಸ್ ವಿಷಯದಲ್ಲಿ ಮುಚ್ಚಿಡಲು ಏನೂ ಇಲ್ಲ ಎಂದು ಸರಕಾರದ ಪರ ಸುಪ್ರೀಂ ಕೋರ್ಟಿಗೆ ತಿಳಿಸಲಾಯಿತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪೆಗಾಸೆಸ್ ಕಣ್ಗಾವಲು ಕುರಿತಂತೆ ಕೇಂದ್ರ ಸರ್ಕಾರ ಯಾವುದನ್ನು ಮುಚ್ಚಿಡುವುದಿಲ್ಲವೆಂದು ಮಂಗಳವಾರ ಸುಪ್ರೀಮ್ ಕೋರ್ಟ್ ಗೆ ತಿಳಿಸಿದ್ದಾರೆ.
ಮಾತ್ರವಲ್ಲದೆ ಪೆಗಾಸೆಸ್ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆಯೆಂದು ಬೊಟ್ಟುಮಾಡಿದರು.
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪ್ರತಿ ದೇಶವು ಈ ಸಾಫ್ಟ್ ವೇರ್ ಗಳನ್ನು ಖರೀದಿಸುತ್ತದೆ. ಕೇಂದ್ರ ಸರ್ಕಾರ ನ್ಯಾಯಾಲಯದಿಂದ ಏನನ್ನೂ ಮುಚ್ಚಿಡಲು ಬಯಸುವುದಿಲ್ಲ. ಸಾರ್ವಜನಿಕವಾಗಿ ಈ ವಿಷಯದ ಕುರಿತು ಚರ್ಚೆ ನಡೆಸುವುದರಿಂದ ಭಯೋತ್ಪಾದಕರು ದುರುಪಯೋಗ ಪಡಿಸುವ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆಯೆಂದು ಅವರು ತಿಳಿಸಿದರು.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪೆಗಾಸೆಸ್ ವಿಷಯವನ್ನು ತಜ್ಞರ ಸಮಿತಿಗೆ ವರ್ಗಾಯಿಸಲಿದ್ದೇವೆ. ಸಾಂವಿಧನಿಕ ನ್ಯಾಯಾಲಯದಲ್ಲಿ ಸಾರ್ವಜನಿಕವಾಗಿ ಈ ವಿಷಯದ ಬಗ್ಗೆ ಚರ್ಚಿಸುವ ಬದಲು ತಜ್ಞರ ಮೂಲಕ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗವುದೆಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ.
ಈ ವಾದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಾಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠವು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವ ಉದ್ದೇಶವು ಯಾರೊಂದಿಗೂ ಇಲ್ಲವೆಂದು ತಿಳಿಸಿದರು.
ನ್ಯಾಯಾಧೀಶರ ಪೀಠ, ಎಸ್.ಜಿ, ವಕೀಲರು, ಅಧಿಕಾರಿಗಳು ಸೇರಿದಂತೆ ಯಾರೂ ಕೂಡ ಭದ್ರತೆಯೊಂದಿಗೆ ರಾಜಿ ಮಾಡುವುದಿಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ ನಾವು ಏನನ್ನೂ ಬಹಿರಂಗಪಡಿಸುವುದಿಲ್ಲ. ಕೆಲವು ಗಣ್ಯ ವ್ಯಕ್ತಿಗಳ ಫೋನ್ ಗಳನ್ನು ಕಣ್ಗಾವಲಿನಲ್ಲಿಟ್ಟಿರುವ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪೆಗಾಸೆಸ್ ಬಳಕೆಯ ಮೂಲಕ ಗಣ್ಯರ ಫೋನ್ ಗಳನ್ನು ಕದ್ದಾಲಿಕೆ ನಡೆಸಿರುವ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಮ್ ಕೋರ್ಟ್ ಈ ಸಂಬಂಧ 10 ದಿನಗಳಲ್ಲಿ ಉತ್ತರಿಸುವಂತೆ ಕೇಂದ್ರಕ್ಕೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.