ನವದೆಹಲಿ: ಜಾರ್ಖಂಡ್ ನ್ಯಾಯಾಧೀಶರ ಹತ್ಯೆಯ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ತನಿಖೆಯ ಮೇಲೆ ವಾರಕ್ಕೊಮ್ಮೆ ಮೇಲ್ವಿಚಾರಣೆ ನಡೆಸುವಂತೆ ಸೋಮವಾರ ಸುಪ್ರೀಮ್ ಕೋರ್ಟ್, ಜಾರ್ಖಂಡ್ ಹೈಕೋರ್ಟ್ ಗೆ ಸೂಚಿಸಿದೆ.
ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ವಿನೀತ್ ಶರಣ್ ಮತ್ತು ಸೂರ್ಯಕಾಂತ್ ರವನ್ನೊಳಗೊಂಡ ಪೀಠವು, ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ತನ್ನ ತನಿಖಾ ವರದಿಯನ್ನು ವಾರಕ್ಕೊಮ್ಮೆ ಜಾರ್ಖಂಡ್ ಹೈಕೋರ್ಟ್ ಗೆ ಸಲ್ಲಿಸುವಂತೆ ಸೂಚಿಸಿದೆ. ಜಾರ್ಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರ ಪೀಠವು ಇದನ್ನು ಮೇಲ್ವಿಚಾರಣೆ ನಡೆಸುತ್ತದೆ.
ಜಾರ್ಖಂಡ್ ನ್ಯಾಯಾಧೀಶರ ಕೊಲೆ ಪ್ರಕರಣವನ್ನು ಜುಲೈ 30 ರಂದು ಸ್ವಯಂಪ್ರೇರಿತ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಮ್ ಕೋರ್ಟ್, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಜಾರ್ಖಂಡ್ ನ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಗೆ ಸೂಚಿಸಿತ್ತು.
ಧನ್ಬಾದ ನ್ಯಾಯಾಲಯದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರನ್ನು ಜುಲೈ 28 ರಂದು ರಣಧೀರ್ ವರ್ಮಾ ಚೌಕ್ನಲ್ಲಿ ಜಾಗಿಂಗ್ ಮಾಡುತ್ತಿದ್ದಾಗ ಆಟೋ ರಿಕ್ಷಾವನ್ನು ಮೇಲೆರೆಗಿಸಿ ಅವರನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಬಹಿರಂಗಗೊಂಡಿತ್ತು.
ಈ ಕೊಲೆ ಪ್ರಕರಣವನ್ನು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಿಬಿಐ ಗೆ ವಹಿಸಿದೆ. ಮಾತ್ರವಲ್ಲದೇ ಸಿಬಿಐ ಮೇಲೆ ಜಾರ್ಖಂಡ್ ಹೈಕೋರ್ಟ್ ನಿಗಾವಹಿಸಲಿದೆಯೆಂದು ಸುಪ್ರೀಮ್ ಕೋರ್ಟ್ ಸ್ಪಷ್ಟಪಡಿಸಿದೆ.