ನವದೆಹಲಿ : ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಸಾಕಷ್ಟು ವಸ್ತುಗಳ ಬೆಲೆ ಏರಿಕೆ ತತ್ತರಿಸಿರುವ ಹೊತ್ತಲ್ಲೇ, ಇದೀಗ ಜು.1ರಿಂದ ಬ್ಯಾಂಕ್ ವ್ಯವಹಾರಗಳೂ ದುಬಾರಿಗೊಳ್ಳಲಿವೆ. ಎಟಿಎಂನಲ್ಲಿ ಹಣ ಪಡೆಯುವುದು ಮತ್ತು ಚೆಕ್ ಬುಕ್ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಜು.1ರಿಂದ ಇದು ಜಾರಿ ಬರಲಿದೆ.
ಎಟಿಎಂ ಅಥವಾ ಬ್ಯಾಂಕ್ ನಲ್ಲಿ ಚೆಕ್ ಮೂಲಕ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಪಡೆಯಬಹುದು. ಅದಕ್ಕಿಂತ ಹೆಚ್ಚಿನ ಬಾರಿ ಹಣ ಪಡೆದುಕೊಂಡರೆ ಸೇವಾ ಶುಲ್ಕ ನೀಡಲಾಗುತ್ತದೆ. ಈ ಶುಲ್ಕವು ಹೆಚ್ಚುವರಿ 15 ರೂ. ಮತ್ತು ಜಿಎಸ್ಟಿ ಒಳಗೊಂಡಿರುತ್ತದೆ.
ಎಸ್ ಬಿಐನ ಇಲ್ಲವೇ ಬೇರೆ ಯಾವುದೇ ಬ್ಯಾಂಕ್ ಎಟಿಎಂನಲ್ಲಿ ಹಣ ಪಡೆದರೂ ಇದೇ ನಿಯಮ ಅನ್ವಯವಾಗುತ್ತದೆ. ಬ್ಯಾಂಕ್ ನ ಬೇಸಿಕ್ ಸೇವಿಂಗ್ಸ್ ಡಿಪಾಸಿಟ್ ಅಕೌಂಡ್ ಖಾತೆದಾರರಿಗೆ ಅನ್ವಯವಾಗುತ್ತದೆ.
ಚೆಕ್ ಬುಕ್ ಪಡೆಯುವಲ್ಲಿಯೂ ನಿಯಮಗಳನ್ನು ಬದಲಾಯಿಸಲಾಗಿದೆ. ಮೊದಲ 10 ಚೆಕ್ ಲೀಫ್ ಹೊಂದಿರುವ ಚೆಕ್ ಬುಕ್ ಉಚಿತವಾಗಿ ನೀಡಲಾಗುತ್ತದೆ. ಅದು ಮುಗಿದರೆ, ನಂತರ ಹೊಸ ಚೆಕ್ ಬುಕ್ ಪಡೆಯಲು ಹಣ ನೀಡಬೇಕು. 10 ಚೆಕ್ ಲೀಫ್ ಇರುವ ಪುಸ್ತಕಕ್ಕೆ 40 ರೂ. ಮತ್ತು 25 ಚೆಕ್ ಲೀಫ್ ಇರುವ ಪುಸ್ತಕಕ್ಕೆ 75 ರೂ. ನೀಡಬೇಕು. ಅಲ್ಲದೆ, ಜಿಎಸ್ಟಿಯೂ ಅನ್ವಯವಾಗುತ್ತದೆ.