ಜನತೆಯನ್ನು ಉಳಿಸಿ-ದೇಶವನ್ನು ರಕ್ಷಿಸಿ: ಕಾರ್ಮಿಕರ ರಾಷ್ಟ್ರೀಯ ಸಮಾವೇಶ ಕರೆ

Prasthutha|

ಬಜೆಟ್ ಅಧಿವೇಶನದ ವೇಳೆಯಲ್ಲಿ ಎರಡು ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ

- Advertisement -

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನವಂಬರ್ 11ರಂದು ನಡೆದ ಕಾರ್ಮಿಕರ ರಾಷ್ಟ್ರೀಯ ಸಮಾವೇಶ ದೇಶದ ಕಾರ್ಮಿಕರ ಬಹುದಿನಗಳ ಆಗ್ರಹಗಳನ್ನು ಪುನರುಚ್ಛರಿಸುತ್ತ, ರಾಜ್ಯಗಳು, ಜಿಲ್ಲೆಗಳು, ಕಾರ್ಖಾನೆ ಗೇಟ್‌ಗಳು ಪಟ್ಟಣಗಳ ಮಂಡಿಗಳು ಇತ್ಯಾದಿಗಳ ಮೂಲಕ ಜನಸಮೂಹಗಳ ವರೆಗೆ ಈ ಕುರಿತ ಸಂದೇಶವನ್ನು ಒಯ್ದು ಎರಡು ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ದುಡಿಯುವ ಜನಗಳನ್ನು ಮತ್ತು ಒಟ್ಟು ಜನತೆಯನ್ನು ಸಿದ್ಧಗೊಳಿಸಿ, ಎಂದು ಕಾರ್ಮಿಕರ ರಾಷ್ಟ್ರೀಯ ಸಮಾವೇಶ ಕಾರ್ಮಿಕರಿಗೆ ಕರೆ ನೀಡಿದೆ.

ಇದರೊಂದಿಗೆ ಜನಗಳನ್ನು ಉಳಿಸಲು ಮತ್ತು ದೇಶವನ್ನು ಉಳಿಸಲು ನಡೆಯುತ್ತಿರುವ ಐಕ್ಯ ಹೋರಾಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಆಶಯವನ್ನು ಅದು ವ್ಯಕ್ತಪಡಿಸಿದೆ.

- Advertisement -

ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯವಾರು ಅಖಿಲ ಭಾರತ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆಯ ಮುತುವರ್ಜಿಯಿಂದ ಈ ಸಮಾವೇಶ ನಡೆದಿದೆ.

ಈ ಬಗ್ಗೆ ಸಮಾವೇಶದಲ್ಲಿ ಮಾತಾಡಿದ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮುಖಂಡರು ಕೇಂದ್ರ ಸರಕಾರ ಹೇಗೆ ಕೊವಿಡ್ ಮಹಾಸೋಂಕಿನ ಸನ್ನಿವೇಶವನ್ನು ಕಾರ್ಮಿಕ ಸಂಹಿತೆಗಳು ಮತ್ತು ಕೃಷಿ ಕಾಯ್ದೆಗಳನ್ನು ಬಲವಂತದಿಂದ ಹೇರಲು, ಅದನ್ನನುಸರಿಸಿ ಲಾಭ ಮಾಡುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳೂ ಸೇರಿದಂತೆ ಎಲ್ಲ ಉದ್ದಿಮೆಗಳನ್ನು  ಖಾಸಗೀಕರಣ ಹಾಗೂ ಅವನ್ನು ಮಾರಾಟ ಮಾಡುವ ಅಥವಾ ಅತ್ಯಂತ ಅಗ್ಗದಲ್ಲಿ ಭೋಗ್ಯಕ್ಕೆ ಕೊಡುವ ಧಾವಂತದಲ್ಲಿದೆ ಎಂಬುದರ ಬಗ್ಗೆ ಹೇಳಿದರು. ಜನಸಾಮಾನ್ಯರ ಮೇಲೆ ಇದರ ದುಷ್ಪರಿಣಾಮಗಳು, ವಿಪರೀತ ಬೆಲೆಯೇರಿಕೆಗಳು, ಯುವಜನರಿಗೆ, ವಿಶೇಷವಾಗಿ ಹಿಂದಳಿದ ವರ್ಗಗಳವರಿಗೆ ಉದ್ಯೋಗಾವಕಾಶಗಳ ಕೊರತೆಯ ಬಗ್ಗೆ ಕಿಂಚಿತ್ತೂ ಯೋಚಿಸದೆ ಇದು ಸಾಗಿದೆ ಎಂದು ಅವರು ಹೇಳಿದರು.

ಐಎನ್‌ಟಿಯುಸಿಯ ಸಂಜಯ್ ಸಿಂಗ್, ಎಐಟಿಯುಸಿಯ ಸುಕುಮಾರ್ ದಾಮ್ಲೆ, ಹೆಚ್‌ಎಂಎಸ್‌ನ ರಾಜಾ ಶ್ರೀಧರ್, ಸಿಐಟಿಯುನ ಹೇಮಲತಾ, ಎಐಯುಟಿಯುಸಿಯ ರಮೇಶ ಪರಾಶರ, ಟಿಯುಸಿಸಿಯ ಶಿವಶಂಕರ, ಎಸ್‌ಇಡಬ್ಲ್ಯುಎನ ಫರೀದಾ ಜಲೀಸ್, ಎಐಸಿಸಿಟಿಯುನ ಶೈಲೇಂದ್ರ ಕೆ ಶರ್ಮ, ಎಲ್‌ಪಿಎಫ್‌ನ ಆರ್.ಕೆ.ಮೌರ್ಯ ಮತ್ತು ಯುಟಿಯುಸಿಯ ಬಝೀಂ ಹುಸೇನ್ ಅಧ್ಯಕ್ಷತೆಯಲ್ಲಿ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

ಸಮಾವೇಶ ನವಂಬರ್ 8ರಂದು ನಿಧನರಾದ ಎಲ್‌ಪಿಎಫ್‌ನ ಅಧ್ಯಕ್ಷ ವಿ.ಸುಬ್ಬರಾಮನ್ ಮತ್ತು ಕೊವಿಡ್-19 ಅವಧಿಯಲ್ಲಿ ನಿಧನರಾದ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮುಖಂಡರಿಗೆ, ಸಾರ್ವಜನಿಕ ಜೀವನದ ಪ್ರತಿಷ್ಠಿತ ವ್ಯಕ್ತಿಗಳಿಗೆ ಮತ್ತು ಲಖಿಂಪುರ್ ಖೇರಿ ಘಟನೆ ಸೇರಿದಂತೆ ಕಳೆದ ಒಂದು ವರ್ಷದ ರೈತ ಹೋರಾಟದಲ್ಲಿ ಅಸು ನೀಗಿದ ರೈತರಿಗೆ, ದ್ವೇಷಾಪರಾಧಗಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸುವುದರೊಂದಿಗೆ ಆರಂಭವಾಯಿತು.

ಸಂಯುಕ್ತ ಕಿಸಾನ್ ಮೋರ್ಚಾದ ನಿಯೋಗವೂ ಕಾರ್ಮಿಕ ವರ್ಗದೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸಿ ಈ ಸಮಾವೇಶದಲ್ಲಿ ಭಾಗವಹಿಸಿತು.

ಹಲವು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕೇಂದ್ರ ಸರಕಾರ ತನ್ನ “ಸಾಧನೆ”ಗಳನ್ನು ಪಟ್ಟಿ ಮಾಡಲು ಸರ್ವಪ್ರಯತ್ನ ನಡೆಸುತ್ತಿದೆ. ಆದರೆ ಅವರಿಗೆ ಹಸಿವು ಒಂದು ಪ್ರಮುಖ ಸಾಮಾಜಿಕ ಕೆಡುಕಾಗಿರುವ 106 ದೇಶಗಳನ್ನು ಪಟ್ಟಿ ಮಾಡಿರುವ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನಕ್ಕೆ ಜಾರಿರುವ ವಾಸ್ತವತೆಯನ್ನು ಮರೆಮಾಚಲು ಸಾಧ್ಯವಿಲ್ಲ.

ಹಿಂದೆಂದೂ ಕಂಡಿರದ ರೀತಿಯಲ್ಲಿ ವಿವಿಧ ವೇಷ ತೊಟ್ಟು ಅಡ್ಡಾಡುತ್ತಿರುವ ಗ್ಯಾಂಗ್‌ಗಳು ಹರಿಯಬಿಟ್ಟಿರುವ ಭಯೋತ್ಪಾದನೆ ಮತ್ತು ದ್ವೇಷ ಮತ್ತು ಸರಕಾರ ಈ ಬಗ್ಗೆ ಕಣ್ಣುಮುಚ್ಚಿಕೊಂಡಿರುವುದು ನಮ್ಮ ಸಾಮಾಜಿಕ ಹಂದರವನ್ನು ಚಿಂದಿ ಮಾಡುತ್ತಿದೆ, ಇದು ನಮ್ಮ ಪ್ರಗತಿಯನ್ನು ಹಲವು ವರ್ಷಗಳಷ್ಟು ಹಿಂದಕ್ಕೆ ತಳ್ಳುತ್ತಿದೆ. ಎಂದು ಹೇಳಿರುವ ಸಮಾವೇಶ ಕಾರ್ಮಿಕರ ದೀರ್ಘಕಾಲದ ಆಗ್ರಹಗಳನ್ನು ಪುನರುಚ್ಚರಿಸಿತು.

ಅಂದರೆ, ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು; ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ರದ್ದು ಮಾಡಬೇಕು; ಯಾವುದೇ ರೀತಿಯ ಖಾಸಗೀಕರಣ ಬೇಡ ಮತ್ತು ಎನ್‌ಎಂಪಿ ರದ್ಧತಿ; ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ಆಹಾರ ಮತ್ತು ಮಾಸಿಕ ರೂ.7500 ಆದಾಯ ಬೆಂಬಲ; ಮನರೇಗಕ್ಕೆ ಹೆಚ್ಚುವರಿ ಹಣ ಒದಗಿಸಬೇಕು ಮತ್ತು ಅದನ್ನು ನಗರಗಳಿಗೂ ವಿಸ್ತರಿಸಬೇಕು; ಅಂಗನವಾಡಿ, ಆಶ, ಮಧ್ಯಾಹ್ನದ ಊಟ ಮತ್ತಿತರ ಸ್ಕೀಮ್ ಕಾರ್ಮಿಕರಿಗೆ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ; ಮಹಾಸೋಂಕಿನ ನಡುವೆ ಜನತೆಯ ಸೇವೆಯಲ್ಲಿ ತೊಡಗಿರುವ ಮುಂಚೂಣಿಯ ಕೆಲಸಗಾರರಿಗೆ ರಕ್ಷಣೆ ಮತ್ತು ವಿಮಾ ಸೌಲಭ್ಯಗಳು; ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಇತರ ಮಹತ್ವದ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಗಳಲ್ಲಿ ಏರಿಕೆ, ಅದಕ್ಕಾಗಿ ಸಂಪತ್ತು ತೆರಿಗೆ ಮುಂತಾದವುಗಳ ಮೂಲಕ ಶ್ರೀಮಂತರ ಮೇಲೆ ತೆರಿಗೆ, ತನ್ಮೂಲಕ ರಾಷ್ಟ್ರೀಯ ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ತರಬೇಕು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕಗಳನ್ನು ಇಳಿಸಬೇಕು; ಮತ್ತು ಬೆಲೆಯೇರಿಕೆಗಳನ್ನು ತಡೆದು ನಿಲ್ಲಿಸಲು ಮೂರ್ತ ಸರಿಪಡಿಕೆ ಕ್ರಮಗಳನ್ನು ಕೈಗೊಳ್ಳಬೇಕು; ಕಾಂಟ್ರಾಕ್ಟ್ ಕಾರ್ಮಿಕರನ್ನು ನಿಯಮಿತಗೊಳಿಸಬೇಕು; ಸಮಾನ ಕೆಲಸಕ್ಕೆ ಸಮಾನ ವೇತನ; ರಾಷ್ಟ್ರೀಯ ಪೆನ್ಶನ್ ಸ್ಕೀಮನ್ನು ರದ್ದು ಮಾಡಿ ಹಳೆಯ ಪೆನ್ಶನ್ ಸ್ಕೀಮನ್ನು ಮತ್ತೆ ತರುವುದು ಇತ್ಯಾದಿ ಆಗ್ರಹಗಳನ್ನು ಸಮಾವೇಶ ಪುನರುಚ್ಚರಿಸಿತು.

 ಈ ಸಂದೇಶವನ್ನು ರಾಜ್ಯಗಳು, ಜಿಲ್ಲೆಗಳು, ಕಾರ್ಖಾನೆ ಗೇಟ್‌ಗಳು, ಪಟ್ಟಣಗಳ ಮಂಡಿಗಳು ಇತ್ಯಾದಿಗಳ ಮೂಲಕ ಜನಸಮೂಹಗಳ ವರೆಗೆ ಒಯ್ದು ಎರಡು ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ದುಡಿಯುವ ಜನಗಳನ್ನು ಮತ್ತು ಸರ್ವ ಜನತೆಯನ್ನು ಸಿದ್ಧಗೊಳಿಸಿ, ಜನಗಳನ್ನು ಉಳಿಸಲು ಮತ್ತು ದೇಶವನ್ನು ಉಳಿಸಲು ನಡೆಯುತ್ತಿರುವ ಐಕ್ಯ ಹೋರಾಟವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವುದಕ್ಕಾಗಿ ಎರಡು ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಬೃಹತ್ ಪ್ರಮಾಣದಲ್ಲಿ ಯಶಸ್ವಿಗೊಳಿಸಬೇಕು ಎಂದು ಕಾರ್ಮಿಕರಿಗೆ ರಾಷ್ಟ್ರೀಯ ಸಮಾವೇಶ ಕರೆ ನೀಡಿದೆ.

Join Whatsapp