Home ಟಾಪ್ ಸುದ್ದಿಗಳು ಅಂತಾರಾಷ್ಟ್ರೀಯ ಪ್ರಯಾಣಕ್ಕೆ IATA ಪಾಸ್ ಬಳಸಲು ಸೌದಿಯಾ ಏರ್ಲೈನ್ಸ್ ಅನುಮತಿ

ಅಂತಾರಾಷ್ಟ್ರೀಯ ಪ್ರಯಾಣಕ್ಕೆ IATA ಪಾಸ್ ಬಳಸಲು ಸೌದಿಯಾ ಏರ್ಲೈನ್ಸ್ ಅನುಮತಿ

►ಜೆದ್ದಾ ಮತ್ತು ಕೌಲಾಲಂಪುರ ನಡುವೆ ಮೊದಲ ಪ್ರಯೋಗ

ಜೆದ್ದಾ: ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಅಭಿವೃದ್ಧಿಪಡಿಸಿದ ಡಿಜಿಟಲ್ ಪ್ರಯಾಣ ಮತ್ತು ಆರೋಗ್ಯ ಪಾಸ್ ಅನ್ನು ಪ್ರಯೋಗಾರ್ಥವಾಗಿ ಬಳಸುವುದಾಗಿ ಸೌದಿಯಾ ಏರ್ ಲೈನ್ಸ್ ಸೋಮವಾರ ಘೋಷಿಸಿದೆ. ಏಪ್ರಿಲ್ 19 ರಂದು ಕೌಲಾಲಂಪುರದಿಂದ ಜೆದ್ದಾಕ್ಕೆ ಸಂಚರಿಸುವ ವಿಮಾನದಲ್ಲಿ ಇದರ ಮೊದಲ ಪ್ರಯೋಗ ನಡೆಯಲಿದೆ. ಮೇ 17 ರ ತನಕ ಇದರ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದೆ ಎಂದು ಏರ್ಲೈನ್ಸ್ ತಿಳಿಸಿದೆ.


ಈ ಪಾಸ್ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಮಾಹಿತಿ ಮತ್ತು ದಾಖಲೆಗಳನ್ನು ಸರಳವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಯಾವುದೇ ಅಧಿಕೃತ ಮುನ್ನೆಚ್ಚರಿಕೆ ಮತ್ತು ಮುನ್ಸೂಚನೆಗಳನ್ನು ಇದು ಒಳಗೊಂಡಿರುತ್ತದೆ. ಈ ಪಾಸ್ ನಲ್ಲಿ ಪ್ರಯಾಣಿಕರ ಪೋರ್ಟ್ ಮಾಹಿತಿ, ವಿಮಾನದ ವಿವರಗಳು,  ವೈಯಕ್ತಿಕ ಮಾಹಿತಿಗಳು ಲಭ್ಯವಿರುತ್ತದೆ.  ಮಾತ್ರವಲ್ಲದೆ ಅಪ್ಲಿಕೇಶನ್ ನಲ್ಲಿ ಕೋವಿಡ್-19 ಪರೀಕ್ಷಾ ಫಲಿತಾಂಶಗಳು ಮತ್ತು ಲಸಿಕೆ ನೀಡಿದ ದಾಖಲೆಗಳನ್ನು ಕೂಡಾ ಸಂಗ್ರಹಿಸಿಡಬಹುದಾಗಿದೆ.


ಐಎಟಿಎ ಹೇಳುವುದೇನೆಂದರೆ ಬಳಕೆದಾರರು ತಮ್ಮ ಮಾಹಿತಿ ದತ್ತಾಂಶಗಳ ಭದ್ರತೆಯ ಬಗ್ಗೆ ಚಿಂತಿಸಬೇಕಾಗಿಲ್ಲ.  ಅದು ಗೌಪ್ಯವಾಗಿದೆ ಮತ್ತು ಸ್ಥಳೀಯವಾಗಿ ಗೂಢಲಿಪೀಕರಿಸಿದ (Encrypted) ರೂಪದಲ್ಲಿ, ಫೋನ್ ನಲ್ಲಿ ಸಂಗ್ರಹಿಸಲಾಗುತ್ತದೆ. ಆಪನ್ನು ಡಿಲೀಟ್ ಮಾಡಿದ ತಕ್ಷಣ ಅದರಲ್ಲಿ ಸಂಗ್ರಹಿಸಲಾಗಿರುವ ಬಳಕೆದಾರರ ಎಲ್ಲಾ ಮಾಹಿತಿಗಳೂ ಕೂಡಾ ಅಳಿಸಿ ಹೋಗುತ್ತದೆ.
ಸಾಂಕ್ರಾಮಿಕ ರೋಗದ ಕಾರಣದಿಂದ ನಷ್ಟದಲ್ಲಿರುವ ಅಂತರರಾಷ್ಟ್ರೀಯ ವಿಮಾನ ಪ್ರಯಾಣವನ್ನು ಸುರಕ್ಷಿತವಾಗಿ ಮರುಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಇದನ್ನು ಆರಂಭಿಸಲಾಗಿದೆ. ಅದೇ ರೀತಿ ಪ್ರಯಾಣಿಕರು ಕೂಡಾ ತಮ್ಮ ಸುರಕ್ಷಿತ ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಪಡೆದುಕೊಳ್ಳುವುದು ಇದರ ಉದ್ದೇಶವಾಗಿದೆ.

ಇದು ಕಡ್ಡಾಯವಲ್ಲದಿದ್ದರೂ ಪ್ರಯಾಣಿಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಪರೀಕ್ಷಾ ಸಮಯದಲ್ಲಿ ಅಂದರೆ ಮೇ 17 ರ ವರೆಗೆ ಪಾಸ್ ಜೊತೆಗೆ ಈ ಹಿಂದೆ ಇದ್ದಂತಹಾ ಎಲ್ಲಾ ಸಾಂಪ್ರದಾಯಿಕ ದಾಖಲೆಗಳನ್ನು ಕೂಡಾ ಕೈಯ್ಯಲ್ಲಿಟ್ಟುಕೊಳ್ಳಬೇಕಾಗಿದೆ.

Join Whatsapp
Exit mobile version