ರಿಯಾದ್: ಖಾಸಗಿ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ 6 ಲಕ್ಷ ಸಂಸ್ಥೆಗಳನ್ನು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ‘ಮುದದ್’ ವೇದಿಕೆಯಡಿ ತರಲಾಗುವುದು ಎಂದು ತಪಾಸಣೆ ಮತ್ತು ಕೆಲಸದ ವಾತಾವರಣ ಅಭಿವೃದ್ಧಿಗಾಗಿ ಇರುವ ಈ ಸಚಿವಾಲಯದ ಉಪ ಮಂತ್ರಿ ಸತ್ತಾಮ್ ಅಲ್ ಹರ್ಬಿ ತಿಳಿಸಿದ್ದಾರೆ.
ಈ ವೇದಿಕೆಯು ವೇತನದಾರರ ನಿರ್ವಹಣಾ ಸೇವೆಯನ್ನು ಒದಗಿಸಲಿದ್ದು ಆಡಳಿತಾತ್ಮಕ ದರಗಳನ್ನು ಕಡಿತಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಐದು ಅಥವಾ ಹೆಚ್ಚು ಕಾರ್ಮಿಕರಿರುವ 2 ಲಕ್ಷ ಸಂಸ್ಥೆಗಳನ್ನು ಮುದಾದ್ ವೇದಿಕೆ ಒಳಗೊಂಡಿದೆ. ಇನ್ನೂ 4 ಲಕ್ಷ ಸಂಸ್ಥೆಗಳು ಖಾಸಗಿ ವಲಯದಲ್ಲಿದ್ದು ಅವುಗಳು ಡಿಸೆಂಬರ್ 1ರಂದು ಸೇರ್ಪಡೆಯಾಗಲಿದೆ.
“ಈ ಖಾಸಗಿ ಕಂಪೆನಿಗಳ ಕಾರ್ಮಿಕರ ಎಲ್ಲಾ ವೇತನಗಳು ಈ ವೇದಿಕೆಯ ಮೂಲಕ ವರ್ಗಾವಣೆಗೊಳ್ಳಲಿದೆ” ಎಂದು ಅವರು ಹೇಳಿದ್ದಾರೆ. ಈ ವ್ಯವಸ್ಥೆಯಿಂದಾಗಿ ಕಾರ್ಮಿಕ ಮಾರುಕಟ್ಟೆಯ ದಕ್ಷತೆ ಹೆಚ್ಚಲಿದೆ ಮತ್ತು ಕಾರ್ಮಿಕ ವಿವಾದಗಳು ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ ಅರಬಿಯಾ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ಅಲ್ ಹರ್ಬಿ, ವೇತನ ರಕ್ಷಣೆಗಾಗಿ ಕಳೆದ ಎರಡು ವರ್ಷಗಳಿಂದ ಮುದಾದ್ ವೇದಿಕೆಯು ಕಾರ್ಯಾಚರಿಸುತ್ತಿದ್ದು, ಹಲವು ಸರಕಾರಿ ಏಜೆನ್ಸಿಗಳು ಇದನ್ನು ಬಳಸುತ್ತಿವೆ ಎಂದಿದ್ದಾರೆ.
ಕಾರ್ಮಿಕ ಮಾರುಕಟ್ಟೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಈ ವೇದಿಕೆ ಹೊಂದಿದೆ ಮತ್ತು ನಾಗರಿಕರಿಗೆ ಖಾಸಗಿ ವಲಯವನ್ನು ಆಕರ್ಷಕಗೊಳಿಸಲಿದೆ ಬ್ಯಾಂಕಿಂಗ್ ವಲಯದೊಂದಿಗೆ ಈ ವೇದಿಕೆಯನ್ನು ಜೋಡಿಸುವುದರಿಂದ ವೇಗದ ವಿಚಕ್ಷಣೆ ಮತ್ತು ಸುಲಭ ಕಾರ್ಯವಿಧಾನವನ್ನು ಸಾಧಿಸಬಹುದಾಗಿದೆ. ಸಂಸ್ಥೆಯ ಮಾಲೀಕ ವೇತನಗಳನ್ನು ಬ್ಯಾಂಕ್ ಮೂಲಕ ವರ್ಗಾಯಿಸುವುದರಿಂದ ಈ ವೇದಿಕೆಯು ನೇರವಾಗಿ ಸಂಸ್ಥೆಯ ಬದ್ಧತೆಯ ಮೇಲೆ ನಿಗಾ ಇಡಲಿದೆ” ಎಂದು ಅಲ್ ಹರ್ಬಿ ತಿಳಿಸಿದ್ದಾರೆ.