ರಿಯಾದ್: ಪ್ರವಾಸಿ ಮತ್ತು ವಾಣಿಜ್ಯ ವೀಸಾಗಳನ್ನು ಹೊಂದಿದವರಿಗೆ ಉಮ್ರಾ ಯಾತ್ರೆ ನಡೆಸಲು ಅವಕಾಶ ನೀಡಲಾಗುವುದೆಂದು ಹಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಪಂಚದಾದ್ಯಂತ 49 ದೇಶಗಳ ನಾಗರಿಕರಿಗೆ ಈ ಸೌಲಭ್ಯ ನೀಡಲಾಗಿದ್ದು, ಅವರು ತಮ್ಮ ವೀಸಾಗಳನ್ನು, ವಿಸಿಟ್ ಸೌದಿ ಅರೇಬಿಯಾ ಎಂಬ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅಥವಾ ಸೌದಿ ವಿಮಾನ ನಿಲ್ದಾಣಕ್ಕೆ ತಲುಪಿದ ತಕ್ಷಣ ವೀಸಾವನ್ನು ಪಡೆಯಬಹುದು. ಕಡಿಮೆ ವೆಚ್ಚದಲ್ಲಿ ಪುಣ್ಯಯಾತ್ರೆಯನ್ನು ನಿರ್ವಹಿಸಲು ಹೆಚ್ಚಿನ ಜನರಿಗೆ ಅನುಕೂಲವಾಗುವಂತೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಉಮ್ರಾ ನಿರ್ವಹಿಸಲು ಅರ್ಹತೆ ಪಡೆದವರಲ್ಲಿ ಅಮೆರಿಕ, ಯುಕೆ ಮತ್ತು ಷೆಂಗೆಸ್ ವೀಸಾ ಹೊಂದಿರುವವರು ಸಹ ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಈ ಸೇವೆಯು ಪ್ರಸಕ್ತ ಹಿಜ್ರಾ 1444 ವರ್ಷದಲ್ಲಿ ಪ್ರಾರಂಭವಾಗಲಿದ್ದು, ವಿಶ್ವದ ಹೆಚ್ಚಿನ ಮುಸ್ಲಿಮರು ಮುಕ್ತವಾಗಿ ಮತ್ತು ಸುಲಭವಾಗಿ ಉಮ್ರಾ ನಿರ್ವಹಿಸಲು ದಾರಿ ಸುಗಮಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸದ್ಯ ಅರ್ಹತೆ ಹೊಂದಿದ ದೇಶಗಳ ಹೊರತಾಗಿ ಇತರ ರಾಷ್ಟ್ರಗಳಿಂದ ಉಮ್ರಾ ನಿರ್ವಹಿಸಲು ಬಯಸುವವರು ತಮ್ಮ ದೇಶಗಳಲ್ಲಿನ ರಾಯಭಾರಿ ಕಚೇರಿಗಳಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.