►► ಕಾರಾಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರ, ಅಮಾನವೀಯವಾಗಿ ನಡೆಸಿಕೊಳ್ಳುವ ಆರೋಪ
ಹೊಸದಿಲ್ಲಿ: ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ಗುಣಮಟ್ಟವಿಲ್ಲದ ಆಹಾರ ನೀಡಲಾಗುತ್ತಿದೆಯೆಂದು ಉತ್ತರ ದಿಲ್ಲಿಯ ಬಂಧನ ಕೇಂದ್ರವೊಂದರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮಯನ್ಮಾರ್, ಸ್ಪೇನ್ ಮತ್ತು ಇತರ ಹಲವು ಆಫ್ರಿಕನ್ ರಾಷ್ಟ್ರಗಳನ್ನೊಳಗಂಡಂತೆ 76 ವಿದೇಶಿಯರು ಅಮರಣಾಂತ ಉಪಾವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಎನ್.ಡಿ.ಪಾಂಚೊಲಿ, ಶಿವರಾಜ್ ಸಿಂಗ್ ಮತ್ತು ಅರುಣ್ ಮಾಜಿಯವರನ್ನೊಳಗೊಂಡ ಪಿಯುಸಿಎಲ್ ತಂಡ ಈ ಬಂಧನ ಕೇಂದ್ರಕ್ಕೆ ಭೇಟಿ ನೀಡಿದೆ. ಬಂಧನ ಕೇಂದ್ರದಲ್ಲಿರುವ ಕೈದಿಗಳು, ಅವರಿಗೆ ನೀಡಲಾಗುವ ಆಹಾರ ತಿನ್ನುವುದಕ್ಕೆ ಯೋಗ್ಯವಾದುದಲ್ಲ ಎಂದು ಕೈದಿಗಳು ದೂರಿರುವುದಾಗಿ ಪಿಯುಸಿಲ್ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
. ರುಚಿಯಿಲ್ಲದ ನೀರಿನಲ್ಲಿ ನೆನೆಸಿಟ್ಟ ತರಕಾರಿಯೊಂದಿಗೆ ಅರೆ ಬೆಂದ ರೊಟ್ಟಿ ಇಲ್ಲಿ ತಮ್ಮ ದೈನಂದಿನ ಆಹಾರವಾಗಿದೆ ಎಂದು ಕೈದಿಗಳು ಹೇಳಿದ್ದಾರೆ. “ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಮತ್ತು ಕೈದಿಗಳು ಅದನ್ನು ಹೊರಗಿನಿಂದ ಖರೀದಿಸಬೇಕಾಗುತ್ತದೆ. ಸರಕಾರದ ‘ಸ್ವಚ್ಛ ಭಾರತ ಅಭಿಯಾನ”ದ ಹೊರತಾಗಿಯೂ ಸ್ವಚ್ಛವೆಂಬುದು ಇಲ್ಲ. ಶೌಚಾಲಯ ಮತ್ತು ಸ್ನಾನ ಕೊಠಡಿಗಳು ಕೊಳಕಾಗಿದ್ದು, ಬಳಸಲು ಅಸಹ್ಯವಾಗುತ್ತದೆ” ಎಂದು ಬಂಧಿತರು ಹೇಳಿರುವುದಾಗಿ ಪಿಯುಸಿಎಲ್ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
“ಟೂತ್ ಬ್ರಶ್, ಟೂತ್ ಪೇಸ್ಟ್, ಸೋಪು, ಚಳಿಗಾಲದ ಬೂಟುಗಳಂತಹ ದಿನನಿತ್ಯದ ಅಗತ್ಯಗಳನ್ನು ಪೂರೈಸುವುದರಲ್ಲಿ ಭ್ರಷ್ಟಾಚಾರವಿದೆ” ಎಂದು ಕೈದಿಗಳು ಹೇಳಿದ್ದರೆ.
ದೈನಂದಿನ ಔಷಧಗಳ ಅಗತ್ಯವಿರುವ ಕೆಲವು ಕೈದಿಗಳಿಗೆ ಅದನ್ನು ಖರೀದಿಸಲು ಅನುಮತಿಸಲಾಗುತ್ತಿಲ್ಲ. ಟಿವಿ ಸೌಲಭ್ಯವನ್ನು ಕಳೆದೊಂದು ವರ್ಷದಿಂದ ತಡೆಯಲಾಗಿದೆ. 2019ರ ಆಗಸ್ಟ್ 17ರಂದು ಬಂಧನ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾ ನ್ಯಾಯಾಧೀಶರು ತಕ್ಷಣವೇ ಟಿ.ವಿಯನ್ನು ವ್ಯವಸ್ಥೆಗೊಳಿಸುವಂತೆ ಮೇಲ್ವಿಚಾರಕರಿಗೆ ಹೇಳಿದ್ದರೂ ಅದು ನಡೆದಿಲ್ಲ.