ಬೆಳಗಾವಿ: ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿದ್ದಾಗ ಸಮಸ್ಯೆ ಕೇಳಲು ಬಿಜೆಪಿ ಜನಪ್ರತಿನಿಧಿಗಳು ಬರಲಿಲ್ಲ. ಆದರೆ, ಈಗ ಚುನಾವಣಾ ಪ್ರಚಾರಕ್ಕೆ ಎಲ್ಲರೂ ಓಡಿ ಬಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರವಾಹದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಾಲ್ಕು ಜನ ಸಚಿವರಿದ್ದರೂ ಕೂಡ ಒಬ್ಬರೂ ಕೋವಿಡ್ ನಿರ್ವಹಣೆ ಹಾಗೂ ಪ್ರವಾಹದ ಕುರಿತು ಒಂದು ಸಭೆಯನ್ನೂ ನಡೆಸಿರಲಿಲ್ಲ. ಜನರಿಗೆ ಸಾಂತ್ವನ ಹೇಳಲು, ಪರಿಹಾರ ಕೊಡಿಸಲು ಪ್ರಯತ್ನಿಸಲಿಲ್ಲ. ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ನಾನು ಉಸ್ತುವಾರಿ ಸಚಿವನಾಗಿದ್ದಾಗ ಆಗಿನ ಶಾಸಕ ಫಿರೋಜ್ ಸೇಠ್ ಅವರೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಬಾಕ್ಸೈಟ್ ರಸ್ತೆ, ಕಣಬರ್ಗಿ ರಸ್ತೆ ನಿರ್ಮಿಸಿದ್ದೇವೆ. ಉದ್ಯಾನವನ, ಜಿಮ್, ಕ್ರೀಡಾಂಗಣಗಳನ್ನು ನಿರ್ಮಿಸಿದ್ದೇವೆ. ಆದರೆ, ರಾಜಕೀಯ ಕಾರಣದಿಂದ ಈವರೆಗೂ ಅವುಗಳ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.