ಬೆಂಗಳೂರು : ರಾಜ್ಯದ ಕರಾವಳಿ ಹಾಗೂ ಇನ್ನಿತರ ಕಡೆಗಳಲ್ಲಿ ಅಕ್ರಮವಾಗಿ ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ, ಗೃಹ ಸಚಿವ ಆರಗ ಜ್ಞಾನೇಂದ್ರ, “ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ” ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು. ಟಿ. ಖಾದರ್ ಎತ್ತಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ, ಸಚಿವರು “ಸ್ಥಳೀಯ ಪೊಲೀಸರು, ಕರಾವಳಿ ಕಾವಲು ಪಡೆ ಹಾಗೂ ಇನ್ನಿತರ ವಿಶೇಷ ಪೊಲೀಸ್ ಸಿಬ್ಬಂದಿ ಸ್ಯಾಟಲೈಟ್ ಫೋನ್ ಮೂಲಕ ಸಂವಹನ ನಡೆಸುವ ವ್ಯಕ್ತಿಗಳ ಬಗ್ಗೆ ವಿಶೇಷ ನಿಗಾ ವಹಿಸುತ್ತಿದ್ದು ಶೀಘ್ರದಲ್ಲಿಯೇ ಅದಕ್ಕೆ ತಡೆ ಹಾಕಲಾಗುವುದು” ಎಂದು ತಿಳಿಸಿದರು.
“ದೇಶದ ಭದ್ರತೆಯ ವಿಚಾರವೂ ಇದರಲ್ಲಿ ಅಡಗಿದೆ” ಎಂದು ತಿಳಿಸಿದ ಸಚಿವರು, ಇತ್ತೀಚಿನ ದಿನಗಳಲ್ಲಿ ಸುಮಾರು 220 ಬಾರಿ ಸ್ಯಾಟಲೈಟ್ ಫೋನ್ ಗಳ ಮುಖಾಂತರ ಬೇರೆ ದೇಶದ ಜೊತೆಗೆ ಸಂಪರ್ಕ ಸಾಧಿಸಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದರು.