Home ಕ್ರೀಡೆ ಸರ್ಫರಾಝ್‌ ಖಾನ್‌ ಹೋರಾಟದ ಬಲದಲ್ಲಿ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮುಂಬೈ

ಸರ್ಫರಾಝ್‌ ಖಾನ್‌ ಹೋರಾಟದ ಬಲದಲ್ಲಿ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮುಂಬೈ

ಸರ್ಫರಾಜ್ ಖಾನ್ ಮತ್ತು ತನುಷ್ ಕೋಟ್ಯಾನ್ ಸಾಹಸದ ನೆರವಿನಿಂದ ಮುಂಬೈ ತಂಡ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಮುಂಬೈ, ಹಿಮಾಚಲ ಪ್ರದೇಶ ತಂಡವನ್ನು 3 ವಿಕೆಟ್‌ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದೆ.

144 ರನ್‌ಗಳ ಗೆಲುವಿನ ಗುರಿಯನ್ನು ಪಡೆದಿದ್ದ ಮುಂಬೈ ತಂಡ 19.3 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟದಲ್ಲಿ 146 ರನ್‌ಗಳಿಸುವ ಮೂಲಕ ಮೊದಲ ಬಾ‌ರಿಗೆ ಸ್ಮಾಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು. ಹಿಮಾಚಲ ಪ್ರದೇಶ ಹಾಗೂ ಮುಂಬೈ ತಂಡಗಳು ಇದೇ ಮೊದಲ ಬಾರಿಗೆ ದೇಶೀಯ ಕ್ರಿಕೆಟ್‌ನ ಚುಟುಕು ಮಾದರಿಯ ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶ ಪಡೆದಿತ್ತು.

ಮುಂಬೈ ಪರ ಆರಂಭಿಕರಾದ ನಾಯಕ ಅಜಿಂಕ್ಯಾ ರಹಾನೆ 1 ರನ್‌ ಮತ್ತು ಪೃಥ್ವಿಶಾ 11 ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ ಆ ಬಳಿಕ ಯಶಸ್ವಿ ಜೈಸ್ವಾಲ್‌ 27, ಶ್ರೇಯಸ್‌ ಅಯ್ಯರ್‌ 34 ಮತ್ತು ನಿರ್ಣಾಯಕ ಘಟ್ಟದಲ್ಲಿ ಸರ್ಫರಾಝ್‌ ಖಾನ್‌ 36 ರನ್‌ಗಳಿಸಿ, ಕೇವಲ 3 ಎಸೆತಗಳು ಬಾಕಿ ಇರುವಾಗ ತಂಡವನ್ನು ಜಯದ ಹಾದಿಯತ್ತ ಮುನ್ನಡೆಸಿದರು.  ಹಿಮಾಚಲ ಪ್ರದೇಶದ ವೈಭವ್ ಅರೋರಾ 27 ರನ್‌ನೀಡಿ ಮೂರು ಪ್ರಮುಖ ವಿಕೆಟ್‌ ಪಡೆದರು.  

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಹಿಮಾಚಲ ಪ್ರದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್‌ಗಳಿಸಿತ್ತು.  ಮುಂಬೈ ಪರ ಬೌಲಿಂಗ್‌ನಲ್ಲಿ ಮೋಹಿತ್‌ ಅವಾಸ್ಥಿ ಮತ್ತು ತನುಷ್ ಕೋಟ್ಯಾನ್ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೋಟ್ಯಾನ್‌ ಪಡೆದುಕೊಂಡರು.

Join Whatsapp
Exit mobile version