Home ಟಾಪ್ ಸುದ್ದಿಗಳು ಹಣದ ವಿಚಾರದಲ್ಲಿ ಸರಳ ವಾಸ್ತು ಗುರೂಜಿ ಹತ್ಯೆ: ಪೊಲೀಸ್ ತನಿಖೆಯಲ್ಲಿ ಏನಿದೆ ?

ಹಣದ ವಿಚಾರದಲ್ಲಿ ಸರಳ ವಾಸ್ತು ಗುರೂಜಿ ಹತ್ಯೆ: ಪೊಲೀಸ್ ತನಿಖೆಯಲ್ಲಿ ಏನಿದೆ ?

ಹುಬ್ಬಳ್ಳಿ: ಐದು ಕೋಟಿಗೆ ಆಸ್ತಿಯೊಂದನ್ನು ಮಾರಿದ ವಿಚಾರವೇ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆಗೆ ಕಾರಣವಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಹಲವು ದಿನಗಳಿಂದ ತಮ್ಮ ಬೇನಾಮಿ ಆಸ್ತಿಯೊಂದನ್ನು ಮಾರಾಟ ಮಾಡಿ ಪಡೆದ ಐದು ಕೋಟಿ ರೂ.ಹಣವನ್ನು ಕೂಡುವಂತೆ ಗುರೂಜಿ ಹಾಕುತ್ತಿದ್ದ ಒತ್ತಡದಿಂದ ರೋಸಿ ಹೋದ ಮಹಾಂತೇಶ ಕೊಲೆ ಮಾಡಿದ್ದಾನೆ ಎಂದು ತನಿಖೆಗೆಯಿಂದ ಬೆಳಕಿಗೆ ಬಂದಿದೆ.

ಗುರೂಜಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದು ಆಸ್ತಿಯ ಹಣ ಏಕೆ ಕೊಡಬೇಕು ಎಂದು ಹಂತಕ ತಗಾದೆ ತೆಗೆದು ರೊಚ್ಚಿಗೆದ್ದು ಮಂಜುನಾಥ ಮರೇವಾಡನ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗುರೂಜಿಯ ಬಹುತೇಕ ವ್ಯವಹಾರಗಳನ್ನು ಹಂತಕ ಮಹಾಂತೇಶ ಶಿರೂರು ನೋಡಿಕೊಳ್ಳುತ್ತಿದ್ದು, ಹಲವು ವರ್ಷಗಳ ಕಾಲ ಮುಂಬೈನಲ್ಲಿ ಸರಳವಾಸ್ತು ಮುಖ್ಯಸ್ಥನಾಗಿ ಕೆಲಸ ಮಾಡುತ್ತಾ ನಂಬಿಕೆ ಗಳಿಸಿದ್ದ ಆತನ ಹೆಸರಿನಲ್ಲಿ ಗುರೂಜಿ ಕೋಟ್ಯಂತರ  ರೂ.ಮೌಲ್ಯದ ಆಸ್ತಿ ಮಾಡಿದ್ದರು.

ಆದರೆ ಐದು ಕೋಟಿಗೆ ಆಸ್ತಿಯೊಂದನ್ನು ಮಾರಿದ ವಿಚಾರವಾಗಿ ಗಲಾಟೆ ನಡೆದಿದೆ. ಇದರಿಂದ ಮಹಾಂತೇಶ ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು, ಇದೇ ವಿಚಾರದಲ್ಲಿ ನಡೆದ ವೈಷಮ್ಯ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.

ಹಂತಕ ಮಹಾಂತೇಶ ಬಗ್ಗೆ ಅಚ್ಚರಿಯ ಸಂಗತಿಗಳು ಬಯಲಿಗೆ ಬಂದಿದ್ದು, ಮಹಾಂತೇಶ ಮತ್ತು ವನಜಾಕ್ಷಿ ಪ್ರೀತಿಸಿ ಮದುವೆಯಾಗಿದ್ದರು. ಗುರೂಜಿ ಬಳಿಯೇ ಕೆಲಸಕ್ಕಿದ್ದ ಮಹಾಂತೇಶ-ವನಜಾಕ್ಷಿ, ಮೊದಲಿಗೆ ವನಜಾಕ್ಷಿ ಕೆಲಸಕ್ಕೆ ಸೇರಿದ್ದು,  ಬಳಿಕ ಮಹಾಂತೇಶ ಕೆಲಸಕ್ಕೆ ಸೇರಿದ್ದ. ಅಲ್ಲಿಯೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ..

ಮನೆಯವರಿಗೂ ಗೊತ್ತಿಲ್ಲದೇ ಇಬ್ಬರಿಗೂ ಗುರೂಜಿ ಮದುವೆ ಮಾಡಿಸಿದ್ದರು. ಅಷ್ಟೊಂದು ಗುರೂಜಿಯನ್ನು ಹಚ್ಚಿಕೊಂಡಿದ್ದ ಜೋಡಿ, ಮನೆಯವರಿಗೆ ತಿಳಿಸದೇ ಮದುವೆ ಮಾಡಿಕೊಂಡಿದ್ದರು. ಹುಬ್ಬಳ್ಳಿಯ ಜೆ.ಪಿ. ನಗರದಲ್ಲಿ ಗುರೂಜಿಯಿಂದ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿದ್ದು, ದಂಪತಿ ಸಾಲ ಮಾಡಿ ಅದರಲ್ಲಿ 306 ನಂಬರಿನ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ನಾಲ್ಕು ವರ್ಷಗಳಿಂದ ಗುರೂಜಿ ಜೊತೆ ಹಳಸಿದ ಸಂಬಂಧ ಹೊಂದಿದ್ದರು. ಇದೀಗ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಮಹಾಂತೇಶ, ಎರಡು ಹೆಣ್ಣು ಮಕ್ಕಳೊಂದಿಗೆ ಹುಬ್ಬಳ್ಳಿಯ ಫ್ಲ್ಯಾಟ್ ನಲ್ಲಿಯೇ ಸಂಸಾರ ಮಾಡುತ್ತಿದ್ದಾನೆ.

ಹಂತರಿಗೆ ಡ್ರಿಲ್:

ನಿನ್ನೆ ರಾತ್ರಿಯಿಂದ ಪೊಲೀಸರು ಹಂತಕರಿಗೆ ಡ್ರಿಲ್ ಮಾಡಿದ್ದು, ಸಿಸಿಬಿ ಎಸಿಪಿ, ಇಬ್ಬರು ಎಸಿಪಿಗಳು ಮೂವರು ಇನ್ಸ್ ಪೆಕ್ಟರ್ ಗಳಿಂದ ಆರೋಪಿಗಳ ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ಗುರೂಜಿಯನ್ನು ಕೊಲೆ ಮಾಡಿದ್ದಾಗಿ ಹಂತಕರು ಒಪ್ಪಿಕೊಂಡಿದ್ದಾರೆ. ಬೇನಾಮಿ ಆಸ್ತಿ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದೇವೆ ಎಂದು ಹಂತಕರು ಬಾಯ್ಬಿಟ್ಟಿದ್ದಾರೆ. ಎಷ್ಟು ಪ್ರಮಾಣದ ಆಸ್ತಿ, ಎಲ್ಲಿಯ ಆಸ್ತಿ, ಯಾರ ಹೆಸರಲ್ಲಿದೆ ಎಲ್ಲದರ ಬಗ್ಗೆ ಸವಿಸ್ತಾರವಾಗಿ ಪೊಲೀಸರು ವಿಚಾರಣೆ ನಡೆಸಿ ಗುರೂಜಿ ಹತ್ಯೆಯ ಹಿಂದಿನ ಅಸಲಿಯತ್ತನ್ನು ಪತ್ತೆಹಚ್ಚತೊಡಗಿದ್ದಾರೆ.

ಈ ನಡುವೆ ಕಚೇರಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಹತ್ತಕ್ಕೂ ಹೆಚ್ಚು ಮಂದಿಯ ಹೆಸರಿನಲ್ಲಿ ಗುರೂಜಿ ಬೇನಾಮಿ ಆಸ್ತಿ ಖರೀದಿ ಮಾಡಿರುವುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸುತ್ತಮುತ್ತಲಲ್ಲಿ ಚಂದ್ರಶೇಖರ್ ಗುರೂಜಿಗೆ ಸೇರಿದ 200 ಎಕರೆ ಜಮೀನಿರುವುದು ಅದರಲ್ಲಿ ಕೆಲವು ಬೇನಾಮಿಯಾಗಿರುವುದು ಕಂಡುಬಂದಿದೆ.

ಎಫ್ ಐಆರ್ ವಿವರ:

ಚಂದ್ರಶೇಖರ್ ಸಹೋದರ ಸಂಜಯ್ ಅಂಗಡಿ ಪೊಲೀಸರಿಗೆ ದೂರು ನೀಡಿದ್ದು, ಸಂಜಯ್ ಅಂಗಡಿ ದೂರಿನ ಮೇಲೆ  ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. 2008ರಿಂದ ಮಹಾಂತೇಶ ಶಿರೂರು ಗುರೂಜಿ ಹತ್ತಿರ ಕೆಲಸಕ್ಕೆ ಆರೋಪಿ ಸೇರಿದ್ದ. 2015ರಲ್ಲಿ ಮಹಾಂತೇಶ್ ಶಿರೂರನನ್ನು ಮುಂಬೈಯಲ್ಲಿ ಉಪಾಧ್ಯಕ್ಷನಾಗಿ ಕಂಪನಿಗೆ ನೇಮಕಗೊಂಡಿದ್ದ.

ಕಂಪನಿಗೆ ಬರುತ್ತಿದ್ದ ಜನರ ಹತ್ತಿರ ಹಣವನ್ನು ಮಹಾಂತೇಶ್ ಪಡೆಯುತ್ತಿದ್ದ ಆರೋಪ ಕೇಳಿಬರುತ್ತದೆ. ಮಹಾಂತೇಶ್ ಜೊತೆಗೆ 20-25 ಜನರು ಶಾಮೀಲಾಗಿದ್ದರು. ಈ ಬಗ್ಗೆ ಎಮ್.ಡಿ.ಯವರಿಗೆ ಹಾಗೂ ಫಿರ್ಯಾದಿದಾರರಿಗೆ ವಿಷಯ ಗೊತ್ತಾಗಿ ಕೆಲಸದಿಂದ ತೆಗೆದು ಹಾಕುತ್ತಾರೆ. ಇದೇ ಸಿಟ್ಟನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹಾಂತೇಶ ಶಿರೂರ ಈತನು ಹುಬ್ಬಳ್ಳಿಯ ಗೋಕುಲ ರೋಡ್ ನ ಜೆ.ಪಿ.ನಗರದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಲಯದ ಪ್ರಕರಣವನ್ನು ಹಿಂದೆ ಪಡೆಯಲು ಹಣ ಕೇಳುತ್ತಿದ್ದರು. ಹಣ ಕೊಡದೇ ಇದ್ದಾಗ ಚಂದ್ರಶೇಖರ್ ಗೂರೂಜಿಗೆ ಧಮ್ಕಿ ಹಾಕುತ್ತಿದ್ದರು. ಅಲ್ಲದೇ ಕೆಲಸದಿಂದ ತೆಗೆದು ಹಾಕಿ ಹಾಕಿದ್ದು, ನ್ಯಾಯಾಲಯದ ಪ್ರಕರಣಕ್ಕೆ ಹಣ ಕೊಟ್ಟಿಲ್ಲ ಎಂದು ಮಹಾಂತೇಶ್ ಹಾಗೂ ಮಂಜುನಾಥ್ ಮರೆವಾಡ ಇಬ್ಬರು ಹತ್ಯೆ ಮಾಡಿದ್ದಾರೆ.

 ಹುಬ್ಬಳ್ಳಿಯ ಹೋಟೆಲ್ ನಲ್ಲಿ ಚಂದ್ರಶೇಖರ್ ಹಾಗೂ ಹೆಂಡತಿ ಅಂಕಿತಾ ಇಬ್ಬರು ಉಳಿದುಕೊಂಡಿರುವ ಹೋಟೆಲ್ ಗೆ ಹೋಗಿ ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಗುರೂಜಿ ಅಂತ್ಯಕ್ರಿಯೆ:

ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಿದ್ದು, ನಗರದ ಶಿವಪ್ರಭು ಲೇಔಟ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಸುಳ್ಯಾ ರಸ್ತೆಯ ಜಮೀನಿನಲ್ಲಿ ಗುರೂಜಿ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ವಿಧಿವಿಧಾನದಂತೆ ನಡೆಸಲಾಗಿದೆ. 15 ದಿನದ ಹಿಂದೆಯಷ್ಟೇ 2ನೇ ಪತ್ನಿಯ ಊರಾದ ಶಿವಮೊಗ್ಗ ಜಿಲ್ಲೆ ಹೆಮ್ಮಕ್ಕಿಯಲ್ಲಿ ಜ್ವರ ಹಿನ್ನೆಲೆಯಲ್ಲಿ ಒಂದು ವಾರ ಗ್ರಾಮದಲ್ಲಿ ಗುರೂಜಿ ತಂಗಿದ್ದರು.

Join Whatsapp
Exit mobile version