ಬಾಗಲಕೋಟೆ: ಬಿ.ಸಿ. ಪಾಟಿಲ್ ಅವರು ಪೊಲೀಸ್ ಅಧಿಕಾರಿ ಆಗಿದ್ದಾಗ ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕೆ ಎಂದು ಹೇಳಲಿ. ಬೌರಿಂಗ್ ಇನ್’ಸ್ಟಿಟ್ಯೂಟ್’ನಲ್ಲಿ ಕಾಲಪತ್ಥರ್ ರೌಡಿಗೆ ಯಾವ ಸೇವೆ ಮಾಡುತ್ತಿದ್ದರು ಎಂಬುದು ಗೊತ್ತಿದೆ. ಇಂತಹ ಪೊಲೀಸ್ ಅಧಿಕಾರಿ, ಸಿನಿಮಾ ನಟನ ಹೇಳಿಕೆಗೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಟೀಕಾಪ್ರಹಾರ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಾಜಿ ಚಿತ್ರನಟ, ಇನ್ನೊಬ್ಬ ನಿರ್ಮಾಪಕ ಅವರ ಘನತೆಗೆ ತಕ್ಕ ಹೇಳಿಕೆ ಕೊಟ್ಟಿದ್ದಾರೆ. ಬಿ.ಸಿ. ಪಾಟೀಲ್ ಗರತಿ ತರಹ ಮಾತನಾಡುತ್ತಾರೆ. ಇಂತವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಬಿಜೆಪಿಗರು ನನ್ನ ಹೇಳಿಕೆಯನ್ನು ತಿರುಚಿ ಉಲ್ಲೇಖ ಮಾಡಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯಲ್ಲಿ ಸ್ಯಾಂಟ್ರೊ ರವಿ, ಸಿ.ಟಿ. ರವಿ, ಪೈಟರ್ ರವಿ, ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ. ಇವರಿಂದ ಏನೂ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದು ಸಿ.ಟಿ. ರವಿ ಹೇಳಿಕೆಗೆ ಹರಿಪ್ರಸಾದ್ ಟಾಂಗ್ ನೀಡಿದರು.
ಸ್ಯಾಂಟ್ರೊ ರವಿಗೂ ಕಾಂಗ್ರೆಸ್’ಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿದ ಹರಿಪ್ರಸಾದ್, ಮುನಿರತ್ನ ನನ್ನ ಗರಡಿಯಲ್ಲಿ ಬೆಳೆದವ. ಅವನು ಹೇಗೆ ಎಂಬುದು ಗೊತ್ತಿದೆ. ಧೈರ್ಯ ಇದ್ದರೆ ಮಾತಾಡಲಿ, ನಾನು ಮಾತಾಡ್ತೀನಿ ಎಂದರು.
ಯತ್ನಾಳ್ ಅವರೇ ಖುದ್ದಾಗಿ ಹೇಳಿದ್ದಾರೆ. ಬಿಜೆಪಿ ಸರಕಾರದ ಮಂತ್ರಿಗಳು ಸಪ್ಲೈ ಮಾಡಿ ಮಂತ್ರಿಗಳಾಗಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಇವರು ಪಿಂಪ್ ಕೆಲಸ ಮಾಡಿ ಮಂತ್ರಿ ಆಗಿದ್ದಾರೆ ಎಂದು ಇನ್ನೊಬ್ಬ ಶಾಸಕರು ಹೇಳ್ತಾರೆ. ಇವರು (ವಲಸೆ ಸಚಿವರು) ನಮ್ಮ ಸರಕಾರದಲ್ಲಿ ಮಂತ್ರಿ ಆಗುವುದಕ್ಕೆ ಏನೆಲ್ಲಾ ಮಾಡಿದ್ದಾರೆ ಎಂಬುದು ಗೊತ್ತಿದೆ. ಆದರೆ ಅದನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ಹರಿಪ್ರಸಾದ್ ಅವರಿಗೆ ಪಿಂಪ್ ಎಂದು ಬಿ.ಸಿ. ಪಾಟೀಲ್ ಹೇಳಿದ ಬಗ್ಗೆ ಕೇಳಿದಾಗ, ಅವರಿಗೆ ಗಂಡಸ್ತನ ಇದ್ದರೆ ಪ್ರೂವ್ ಮಾಡಲಿ. ಇವರು ಬಳಸುವ ಪದಗಳನ್ನು ನೋಡಿದರೆ ಅವರ ಯೋಗ್ಯತೆ ಏನು ಎಂಬುದು ಗೊತ್ತಾಗುತ್ತದೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಸಚಿವರ ವಿರುದ್ಧ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದರು.