Home ಕರಾವಳಿ ಸುರತ್ಕಲ್ ನೈತಿಕ ಪೊಲೀಸ್ ಗಿರಿ: ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು, ಪೊಲೀಸರ ನಡೆಗೆ ಸಾರ್ವಜನಿಕರ ಆಕ್ರೋಶ

ಸುರತ್ಕಲ್ ನೈತಿಕ ಪೊಲೀಸ್ ಗಿರಿ: ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು, ಪೊಲೀಸರ ನಡೆಗೆ ಸಾರ್ವಜನಿಕರ ಆಕ್ರೋಶ

ಮಂಗಳೂರು: ವಿಹಾರಕ್ಕೆಂದು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಸಂಘಪರಿವಾರದ ಕಾರ್ಯಕರ್ತರು ತಡೆದು ದಾಂಧಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಜಾಮೀನು ದೊರೆಯುವಂತಹ ಐಪಿಸಿ ಸೆಕ್ಷನ್ ಹಾಕಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.


ಈಗಾಗಲೇ ಆರೋಪಿಗಳಿಗೆ ಪೊಲೀಸ್ ಠಾಣೆಯಲ್ಲೇ ಜಾಮೀನು ನೀಡಿ ಕಳುಹಿಸಕೊಡಲಾಗಿದೆ. ಪೊಲೀಸರ ಈ ನಡೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಸೆಕ್ಷನ್ ಹಾಕುವಲ್ಲಿಯೂ ತಾರತಮ್ಯವೆಸಗಲಾಗಿದೆ ಎಂದು ಆರೋಪಿಸಿದೆ.


ಬೆಂಗಳೂರಿನಲ್ಲಿ ಇತ್ತೀಚೆಗೆ ಹಿಂದೂ ಯುವಕನೋರ್ವ ಮುಸ್ಲಿಮ್ ಮಹಿಳೆಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ತಂಡವೊಂದು ನೈತಿಕ ಪೋಲಿಸ್ ಗಿರಿ ನಡೆಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಜಾಮೀನು ರಹಿತ IPC 153(A),506,341,34,504,323 ಮುಂತಾದ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಟ್ವೀಟ್ ಮಾಡಿ, ರಾಜ್ಯದಲ್ಲಿ ಇಂತಹ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಅದೇ ರೀತಿ ಕಳೆದ ತಿಂಗಳು ಕಾವೂರಿನಲ್ಲಿ ನಡೆದ ಹಲ್ಲೆ ಪ್ರಕರಣವೊಂದರಲ್ಲಿ ವಿಶೇಷ ಕಾಳಜಿ ವಹಿಸಿದ ಪೊಲೀಸರು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದ ಇಬ್ಬರು ಯುವಕರನ್ನು ಸಂಘಪರಿವಾರದ ಒತ್ತಡಕ್ಕೆ ಮಣಿದು ಆಸ್ಪತ್ರೆಯ ಬೆಡ್ ನಿಂದಲೇ ಬಂಧಿಸಿ ಅವರ ವಿರುದ್ಧ ಕೊಲೆಯತ್ನ (307) ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಎರಡು ದಿನಗಳ ಹಿಂದೆ ಪೊಲೀಸರ ಸಮ್ಮುಖದಲ್ಲೇ ಸುರತ್ಕಲ್ ನಲ್ಲಿ ಸಂಘಪರಿವಾರದ ಗೂಂಡಾಗಳು ಅಮಾಯಕ ವಿದ್ಯಾರ್ಥಿಗಳ ಮೇಲೆ ನಡೆಸಿದ ಅನೈತಿಕ ಪೋಲಿಸ್ ಗಿರಿ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳ ವಿರುದ್ಧ ಸುಲಭವಾಗಿ ಜಾಮೀನು ಸಿಗುವಂತಹ ಐಪಿಸಿ 341,504, 506 ಸೆಕ್ಷನ್ ಗಳನ್ನು ಹಾಕಿರುವುದು ಪೊಲೀಸರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಶಾಹುಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಈ ಮೇಲಿನ ಪ್ರಕರಣಗಳೂ ಮತ್ತು ಸುರತ್ಕಲ್ ಪ್ರಕರಣವೂ ಒಂದೇ ಸ್ವರೂಪದ್ದಾಗಿದ್ದರೂ ಪೊಲೀಸ್ ಇಲಾಖೆ ಈ ರೀತಿಯ ತಾರತಮ್ಯ ಧೋರಣೆ ನಡೆಸಲು ಕಾರಣವೇನು? ಪೊಲೀಸ್ ಅಧಿಕಾರಿಯೊಬ್ಬರ ಸಮ್ಮುಖದಲ್ಲೇ ಕೃತ್ಯ ನಡೆಸಿದ ಸಂಘಪರಿವಾರದ ಗೂಂಡಾಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಯಾಕೆ ವಿಫಲವಾಗುತ್ತಿದೆ? ಯಾರ ಒತ್ತಡಕ್ಕೆ ಪೊಲೀಸ್ ಇಲಾಖೆ ಮಣಿಯುತ್ತಿದೆ? ಆರೋಪಿಗಳ ಧರ್ಮದ ಆಧಾರವಾಗಿ ಪ್ರಕರಣ ದಾಖಲಿಸಲಾಗುತ್ತಿದೆಯೇ? ಸಂಘಪರಿವಾರದ ಗೂಂಡಾಗಿರಿಗೆ ಪೊಲೀಸ್ ಇಲಾಖೆಯೂ ಸಾಥ್ ನೀಡುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಆದರೆ ಈ ಆರೋಪವನ್ನು ನಿರಾಕರಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಬೇರೆ ಕಡೆ ಹಾಕಿರುವ ಸೆಕ್ಷನ್ ಗಳನ್ನೂ ಸುರತ್ಕಲ್ ಘಟನೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಐಪಿಸಿ ಸೆಕ್ಷನ್ ದೇಶದ ಎಲ್ಲರಿಗೂ ಅನ್ವಯ. ಸಂತ್ರಸ್ತರು ನೀಡಿದ ದೂರಿನ ಆಧಾರದಲ್ಲಿ ಸೆಕ್ಷನ್ ಹಾಕಲಾಗಿದೆ. ಇದರಲ್ಲಿ ತಾರತಮ್ಯವೆಸಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version