ಆಗ್ರಾ: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಮದುವೆಯಾಗಿದ್ದನ್ನೇ ಮುಂದಿಟ್ಟು ಸಂಘಪರಿವಾರದ ಕಾರ್ಯಕರ್ತರು ಆಗ್ರಾದಲ್ಲಿರುವ ಮುಸ್ಲಿಂ ಯುವಕನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಸಾಜಿದ್ ನನ್ನು ಸ್ವ ಇಚ್ಛೆಯಿಂದ ಮದುವೆಯಾಗಿದ್ದೇನೆ ಎಂದು ರಿತಿಕಾ ಜೈನ್ ಹೇಳಿಕೆ ನೀಡಿದ ಹೊರತಾಗಿಯೂ ಆಗ್ರಾ ಪೊಲೀಸರು ಯುವತಿಯನ್ನು ದೆಹಲಿಯಿಂದ ಕರೆದೊಯ್ದಿದ್ದಾರೆ, ಅಲ್ಲದೇ ಪೊಲೀಸರ ಸಮ್ಮುಖದಲ್ಲೇ ಸಾಜಿದ್ ಮನೆಯನ್ನು ಧ್ವಂಸಗೈಯ್ಯಲಾಗಿದೆ.
ಸಾಜಿದ್ – ರಿತಿಕಾ ಜೈನ್ ವಿವಾಹದ ನಂತರ, ಆಗ್ರಾ ಪೊಲೀಸರು ಸಾಜಿದ್ ಮನೆ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಸಾಜಿದ್ ನ ಕುಟುಂಬವು ಮನೆಯನ್ನು ತೊರೆದಿತ್ತು, ಆದರೆ ಶುಕ್ರವಾರ ದುಷ್ಕರ್ಮಿಗಳು ಸಾಜಿದ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕ್ರಮಕೈಗೊಳ್ಳದೇ ಪಕ್ಕದಲ್ಲೇ ನಿಂತು ನೋಡುವ ದೃಶ್ಯಗಳು ವೈರಲ್ ಆಗಿದೆ.
ಪ್ರಕರಣಕ್ಕೆ ಕುರಿತಂತೆ ಈ ಹಿಂದೆಯೇ ಸ್ವತಃ ರಿತಿಕಾ ಜೈನ್ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ನಾನು ಸಾಜಿದ್ ಅವರನ್ನು ಯಾರ ಒತ್ತಡದಿಂದ ಮದುವೆಯಾಗಿಲ್ಲ, ಸ್ವ ಇಚ್ಛೆಯಿಂದಲೇ ಮದುವೆಯಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಇದೆಲ್ಲದರ ಹೊರತಾಗಿಯೂ ಪೊಲೀಸರು ಸಾಜಿದ್ ಮನೆ ಮೇಲೆ ನಿರಂತರ ದಾಳಿ ನಡೆಸಿ ಯುವತಿಯನ್ನು ಕರೆದೊಯ್ದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.