Home ಕರಾವಳಿ ಉಪ್ಪಿನಂಗಡಿ | ಕರುವನ್ನು ಮನೆಗೆ ಕೊಂಡೊಯ್ಯುತ್ತಿದ್ದ ಮಹಿಳೆಯ ಬಟ್ಟೆ ಹರಿದು ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರು

ಉಪ್ಪಿನಂಗಡಿ | ಕರುವನ್ನು ಮನೆಗೆ ಕೊಂಡೊಯ್ಯುತ್ತಿದ್ದ ಮಹಿಳೆಯ ಬಟ್ಟೆ ಹರಿದು ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರು

ಉಪ್ಪಿನಂಗಡಿ: ಮೇಯಲು ಕಟ್ಟಿದ್ದ ಕರುವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಂಘಪರಿವಾರದ ಕಾರ್ಯಕರ್ತರು ಮಹಿಳೆ ಮೇಲೆ ಹಲ್ಲೆ ನಡೆಸಿ, ಮಾಂಗಲ್ಯ ಸರ ಕಿತ್ತು ದೌರ್ಜನ್ಯವೆಸಗಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.

ಈ ಕುರಿತು ಹಲ್ಲೆಗೊಳಗಾದ ಮಹಿಳೆ ಅಳಲು ತೋಡಿಕೊಂಡಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಲ್ಯಾಡಿಯ ಮಣ್ಣಗುಂಡಿಯಲ್ಲಿ ಮೂರು ದಿನಗಳ ಹಿಂದೆ ತನಗೆ ಹಾಗೂ ತನ್ನ ಕೆಲಸದವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆ ಅಂಗಡಿಯೊಂದನ್ನು ನಡೆಸುತ್ತಿದ್ದು, ರಾತ್ರಿ ಏಳೂವರೆ ಗಂಟೆ ಸುಮಾರಿಗೆ ಕೆಲಸದವರಾದ ಕುಮಾರ್ ಎಂಬವರು ಕರುವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಬೊಲೇರೋ ಕಾರಿನಲ್ಲಿ ಬಂದ ಸಂಘಪರಿವಾರದ ಕಾರ್ಯಕರ್ತರು “ಕರುವನ್ನು ಕಡಿಯುವುದಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ” ಎಂದು ಆರೋಪಿಸಿ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಮಹಿಳೆ ಅಲ್ಲಿಗೆ ತೆರಳಿದಾಗ ತಂಡವು ಅವರಿಗೂ ಅವಾಚ್ಯವಾಗಿ ನಿಂದಿಸಿ, ಬಟ್ಟೆಯನ್ನು ಹರಿದು ಹಲ್ಲೆ ನಡೆಸಿದೆ ಹಾಗೂ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನೂ ಕಿತ್ತು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಹಲ್ಲೆಗೈದ ತಂಡದಲ್ಲಿದ್ದ ಕೊಕ್ಕಡದ ಸಂಘಪರಿವಾರದ ಕುಂಟ ಮಹೇಶ್ ಎಂಬಾತನ ಹೆಸರನ್ನು ನಾನು ಪೊಲೀಸರಿಗೆ ತಿಳಿಸಿದ್ದೇನೆ. ಆದರೂ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹಲ್ಲೆಗೊಳಗಾದ ಮಹಿಳೆ ವೀಡಿಯೋದಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಸಂತ್ರಸ್ತ ಮಹಿಳೆಯು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತನಗೆ ಪೊಲೀಸರು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪಿಯನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ.

Join Whatsapp
Exit mobile version