► ಉತ್ತರಾಖಂಡ, ಪಂಜಾಬ್ ನಲ್ಲಿ ಕಾಂಗ್ರೆಸ್ ನ ಶಕ್ತಿ ವೃದ್ಧಿ
ನವದೆಹಲಿ: ಮುಂದಿನ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವರ್ಚಸ್ಸು ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಲಖಿಂಪುರ ಘಟನೆಯು ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಾನಿ ಮಾಡಲಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವರ್ಚಸ್ಸು ವೃದ್ಧಿಸುತ್ತಿದೆ ಎಂದು ‘ಎಬಿಪಿ–ಸಿವೋಟರ್ ಮತ್ತು ಐಎಎನ್ಸ್’ ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ 3,571 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸಮೀಕ್ಷಾ ಸಂಸ್ಥೆಗಳು ಹೇಳಿವೆ. ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿಯವರು ಉತ್ತರ ಪ್ರದೇಶದಲ್ಲಿ ನಡೆಸುತ್ತಿರುವ ಚುನಾವಣಾ ಪ್ರಚಾರದಿಂದ ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ಶೇಕಡಾ 47.2 ರಷ್ಟು ಜನರು ಹೇಳಿದ್ದರೆ, ಶೇ 52.8ರಷ್ಟು ಮತದಾರರು ಇಲ್ಲ ಎಂಬ ಉತ್ತರ ನೀಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲಿದೆ. ಆದರೆ 108 ಸ್ಥಾನ ಕಡಿಮೆಯಾಗುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷದ ಗಳಿಕೆ ಹೆಚ್ಚಾಗಲಿದೆ ಎಂದು ‘ಎಬಿಪಿ–ಸಿ–ವೋಟರ್–ಐಎಎನ್ಎಸ್ ಸಮೀಕ್ಷಾ ವರದಿ ಹೇಳಿದೆ.
ಉತ್ತರಾಖಂಡ ಮತ್ತು ಪಂಜಾಬ್ ಗಳಲ್ಲಿ ಕಾಂಗ್ರೆಸ್ ನ ಶಕ್ತಿ ವೃದ್ಧಿಸಲಿದೆ ಎಂದೂ ಸಮೀಕ್ಷೆ ತಿಳಿಸಿದೆ. ಸಮಾಜವಾದಿ ಪಕ್ಷವೂ ಬೆಳೆಯುತ್ತಿದ್ದು, ಉಭಯ ಪಕ್ಷಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 217 ಸ್ಥಾನ ಗಳಿಸಲಿವೆ. ಇದು ಕಳೆದ ಬಾರಿಗಿಂತ (325) 108 ಕಡಿಮೆಯಾಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವರ್ಚಸ್ಸು ವೃದ್ಧಿಸುತ್ತಿದೆ. ಅವರ ಪಕ್ಷವು 156 ಸ್ಥಾನ ಗಳಿಸಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಮಧ್ಯೆಯೇ ನೇರ ಹಣಾಹಣಿ ಏರ್ಪಡಲಿದೆ. ಎರಡು ಪಕ್ಷಗಳ ನಡುವಣ ಅಂತರ ಸುಮಾರು 60ರಷ್ಟು ಇರಬಹುದು ಎಂದು ಸಮೀಕ್ಷೆ ತಿಳಿಸಿದೆ.
ಪಂಜಾಬ್ ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವಣ ಅಂತರ ಕಡಿಮೆಯಾಗಲಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 51 ಸ್ಥಾನ ಗಳಿಸಲಿದೆ. ಕಾಂಗ್ರೆಸ್ 46 ಸ್ಥಾನ ಗಳಿಸಲಿದೆ. ಕಳೆದ ಬಾರಿ ಕಾಂಗ್ರೆಸ್ 77 ಸ್ಥಾನ ಗಳಿಸಿತ್ತು. ಅಕಾಲಿ ದಳ 20 ಸ್ಥಾನಗಳೊಂದಿಗೆ 3ನೇ ಸ್ಥಾನದಲ್ಲಿದೆ. 40 ಸದಸ್ಯ ಬಲದ ವಿಧಾನಸಭೆಯ ಗೋವಾದಲ್ಲಿ 21 ಸ್ಥಾನದೊಂದಿಗೆ ಬಿಜೆಪಿಯೇ ಮುಂಚೂಣಿಯಲ್ಲಿದೆ. ಸಮೀಕ್ಷೆಯಲ್ಲಿ ಇತರರಿಗೆ 10, ಎಎಪಿಗೆ 5 ಹಾಗೂ ಕಾಂಗ್ರೆಸ್ಗೆ 4 ಸ್ಥಾನ ದೊರೆತಿವೆ. 60 ಸದಸ್ಯ ಬಲದ ವಿಧಾನಸಭೆಯ ಮಣಿಪುರದಲ್ಲಿ 27 ಸ್ಥಾನಗಳೊಂದಿಗೆ ಬಿಜೆಪಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್ 22 ಸ್ಥಾನ ಗಳಿಸಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.
ಉತ್ತರಾಖಂಡದಲ್ಲಿ ಬಿಜೆಪಿಯೇ ಮುಂಚೂಣಿಯಲ್ಲಿದೆ. ಆದರೆ, ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ 57ಕ್ಕಿಂತ ಈ ಬಾರಿ 19 ಸ್ಥಾನ ಕಡಿಮೆ ಇದೆ. ಇಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದ್ದು, ಈ ಬಾರಿ 21 ಸ್ಥಾನ ಹೆಚ್ಚು ಗಳಿಸಿ ತನ್ನ ಬಲವನ್ನು 32ಕ್ಕೆ ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.