ಬೆಂಗಳೂರು: ಬೆಂಗಳೂರು ನಗರದ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಮುರುಘಾ ಮಠಕ್ಕೆ ಸೇರಿದ 7 ಎಕರೆ ಜಮೀನನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಮಠಕ್ಕೆ ಕೊಟ್ಯಂತರ ರೂಪಾಯಿ ನಷ್ಟ ಮತ್ತು ಭಕ್ತರಿಗೆ ನಂಬಿಕೆ ದ್ರೋಹ ಮಾಡಿರುವ ಆರೋಪದಲ್ಲಿ ಮುರುಘಾಮಠದ ಪೀಠಾಧೀಶ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಮಠದ ಭಕ್ತ ತುಮಕೂರಿನ ಪಿ ಎಸ್ ಪ್ರಕಾಶ್ ಅಲಿಯಾಸ್ ಪಂಚಿ ಎಂಬುವರು ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರಾದ ರಾಚೋಟಿ ಮಹಾಗುಂಡಪ್ಪ ಶಿರೂರ್ ನಡೆಸಿದರು.
ದೂರುದಾರರು ಮತ್ತು ಆರೋಪಿಗಳು ಇಬ್ಬರೂ ಗೈರಾಗಿದ್ದು, ಯಾರೂ ಹಾಜರಾಗದಿರುವುದರಿಂದ ಎರಡನೇ ಆರೋಪಿಗೆ ಪುನಃ ಜಾಮೀನುರಹಿತ ವಾರೆಂಟ್ ಹಾಗೂ ಮೊದಲ ಆರೋಪಿ ಮುರುಘಾ ಶರಣರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಲು ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ಮುರುಘರಾಜೇಂದ್ರ ಮಠಕ್ಕೆ ಸೇರಿದ ಬೆಂಗಳೂರು ದಕ್ಷಿಣ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಸರ್ವೇ ನಂ 34 ರಲ್ಲಿ 7 ಎಕರೆ 18 ಗುಂಟೆ ಜಮೀನಿತ್ತು. ಈ ಜಮೀನನ್ನು ಶಿವಮೂರ್ತಿ ಮುರುಘಾ ಶರಣರು, ಎರಡನೇ ಆರೋಪಿಯಾಗಿರುವ ಆನಂದ್ ಕುಮಾರ್ ಎಂಬುವರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಪ್ರಕಾಶ್ ಅವರು ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಲ್ಲದೆ, 7 ಎಕರೆ 18 ಗುಂಟೆ ಜಮೀನಿಗೆ ಮಾರುಕಟ್ಟೆ ಬೆಲೆಯಂತೆ 7 ಕೋಟಿ ರೂಪಾಯಿಯಾಗುತ್ತದೆ. ಆದರೆ, ಇದೇ ಜಮೀನನ್ನು ಕೇವಲ 49 ಲಕ್ಷ ರೂಪಾಯಿಗಳಿಗೆ ಸ್ವಾಮೀಜಿ ಮಾರಾಟ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಮಾಡಿಕೊಡಲಾಗಿದೆ ಎಂದು ಆರೋಪಿಸಿದ್ದರು.
ಅಲ್ಲದೆ, 1995ರಲ್ಲಿ ಹಾವೇರಿಯಲ್ಲಿ ಮಠದ ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿ ಚಾರಿಟಿ ಕಮಿಷನರ್ ಅನುಮತಿ ಪಡೆಯಲಾಗಿತ್ತು. ಆದರೆ, ಕೆಂಗೇರಿ ಬಳಿಯ ಜಮೀನನ್ನು ಮಾರಾಟ ಮಾಡುವಾಗ ಈ ಪ್ರಕ್ರಿಯೆ ಪಾಲಿಸಲಾಗಿಲ್ಲ ಎಂದು ದೂರಲಾಗಿದೆ.
ಡಾ. ಶಿವಮೂರ್ತಿ ಶರಣರು ಮತ್ತು ಮಠದ ಜಮೀನು ಖರೀದಿ ಮಾಡಿರುವ ಆನಂದ ಕುಮಾರ್ ಭಕ್ತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಪತ್ರಿಕಾ ಪ್ರಕಟಣೆ ಹೊರಡಿಸದೆ ಮಾರಾಟ ಮಾಡಲಾಗಿದೆ. ಆದ್ದರಿಂದ, ಆರೋಪಿಗಳಾದ ಡಾ. ಶಿವಮೂರ್ತಿ ಶರಣರು ಮತ್ತು ಆನಂದ್ ಕುಮಾರ್ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರ ಕೋರಿದ್ದರು. ಈ ಸಂಬಂಧ 2019ರ ನವೆಂಬರ್ 13ರಂದು ಪ್ರಕಾಶ್ ಅವರು ನ್ಯಾಯಾಲಯದ ಮುಂದೆ ಸಾಕ್ಷಿಯನ್ನೂ ನುಡಿದಿದ್ದಾರೆ.
(ಕೃಪೆ: ಬಾರ್ & ಬೆಂಚ್)