ಬಂಟ್ವಾಳ: ಸಜಿಪ ಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ಕ್ಷೇತ್ರವನ್ನು ನಿರ್ಲಕ್ಷ್ಯಿಸಿದ್ದರಿಂದ ಗ್ರಾಮ ಪಂಚಾಯತ್ ನಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ಇದೀಗ ಎಸ್ ಡಿಪಿಐ ಪಕ್ಷದ ಬೆಂಬಲಿತ ಸದಸ್ಯರು ಆಡಳಿತವನ್ನು ನಡೆಸುತ್ತಿರುವ ಸಜೀಪಮುನ್ನೂರು ಗ್ರಾಮ ಪಂಚಾಯತ್ ಜನಪರ ಆಡಳಿತವನ್ನು ನೀಡುತ್ತಿದೆ ಎಂದು ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಬೀನ ತಿಳಿಸಿದ್ದಾರೆ.
ಪಂಚಾಯತ್ ವ್ಯಾಪ್ತಿಯ ನಾಲ್ಕನೇ ವಾರ್ಡಿನ ಶಾಂತಿನಗರದಲ್ಲಿ ಕಲುಷಿತ ನೀರಿನ ಸಮಸ್ಯೆ ಇದ್ದು ಇದಕ್ಕೆ ಅಲ್ಲಿನ ಬಿಜೆಪಿ ಬೆಂಬಲಿತ ನಾಲ್ವರು ಸದಸ್ಯರು ಯಾವುದೇ ಸ್ಪಂದನೆ ನೀಡದಿರುದರಿಂದ 4ನೇ ವಾರ್ಡಿನ ನಾಗರೀಕರು ಈ ಬಿಜೆಪಿ ಬೆಂಬಲಿತ ಸದಸ್ಯರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತ್ ಕಚೇರಿ ಮುಂದೆ ಪ್ರತಿಭಟಿಸಿದ್ದರು. ಎಸ್ ಡಿ ಪಿ ಐ ಅಧಿಕಾರಕ್ಕೆ ಬರುವ ಮೊದಲು ನಂದಾವರ 1ನೇ ವಾರ್ಡ್ ನಲ್ಲಿ ಕಲುಷಿತ ನೀರಿನ ಸಮಸ್ಯೆ ಇತ್ತು. ಇದನ್ನು ಎಸ್ ಡಿಪಿಐ ಅಧಿಕಾರಕ್ಕೆ ಬಂದ ತಕ್ಷಣ ಆ ವಾರ್ಡಿನ ನಾಲ್ವರು ಪ್ರತಿನಿಧಿಗಳು ನಂದಾವರ 1ನೇ ವಾರ್ಡಿನ ಕಲುಷಿತ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ನದಿಯ ಕಲುಷಿತ ನೀರು ಕುಡಿಯುತ್ತಿದ್ದ 4ನೇ ವಾರ್ಡಿನಲ್ಲಿ ಬಾವಿಯನ್ನು ತೋಡಿದ್ದು ಅದಕ್ಕೆ ಮೋಟಾರು ಅಳವಡಿಸಲು ಮಾತ್ರ ಬಾಕಿ ಇದೆ. ಈ ಸಲದ ಕ್ರಿಯಾ ಯೋಜನೆಯ ಮೂಲಕ 4ನೇ ವಾರ್ಡಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ಮೂರನೇ ವಾರ್ಡಿನಲ್ಲಿ ಕೂಡ ಈ ಸಮಸ್ಯೆ ಇದ್ದು ಅದನ್ನು ಕೂಡ ಆದಷ್ಟು ಶೀಘ್ರ ಬಗೆಹರಿಸಲಾಗುವುದು ಎಂದು ಶಬೀನ ತಿಳಿಸಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಸಜೀಪಮುನ್ನೂರು ಗ್ರಾಮ ಪಂಚಾಯತ್ ಗೆ ಇದುವರೆಗೆ ಯಾವುದೇ ಅನುದಾನ ನೀಡಿಲ್ಲ. ಗ್ರಾಮದಲ್ಲಿ ಮೂಲ ಸೌಕರ್ಯಗಳಾದ ಚರಂಡಿ, ರಸ್ತೆಯ ಸಮಸ್ಯೆಗಳಿದ್ದು ಇದನ್ನು ಬಗೆಹರಿಸುವ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಶಾಸಕರು ಸಜಿಪಮೂನ್ನೂರು ಗ್ರಾಮಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಬೀನ ಮನವಿ ಮಾಡಿದ್ದಾರೆ.