Home ಟಾಪ್ ಸುದ್ದಿಗಳು ಶಿಕ್ಷಣವನ್ನು ಕೇಸರೀಕರಣ, ಖಾಸಗಿಕರಣ ಮಾಡುವ ಹುನ್ನಾರವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ಧೃವನಾರಾಯಣ್

ಶಿಕ್ಷಣವನ್ನು ಕೇಸರೀಕರಣ, ಖಾಸಗಿಕರಣ ಮಾಡುವ ಹುನ್ನಾರವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ಧೃವನಾರಾಯಣ್

ಬೆಂಗಳೂರು: ಶ್ರೇಣಿಕೃತ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಮನುವಾದಿ ಬಿಜೆಪಿ ದೇಶದ ಶಿಕ್ಷಣವನ್ನು ಕೇಸರೀಕರಣ ಮಾಡುವುದರ ಜತೆಗೆ ಖಾಸಗಿಕರಣ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರದಲ್ಲಿ ಜಾರಿಗೆ ತರಲು ಮುಂದಾಗಿದೆ. ಇದು ರಾಜ್ಯದ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಧೃವನಾರಾಯಣ್ ಅವರು, ‘ಬಿಜೆಪಿ ಸರ್ಕಾರದ ನೂತನ ಶಿಕ್ಷಣ ನೀತಿ ನಗರ ಹಾಗೂ ಗ್ರಾಮಾಂತರ, ಬಡವ ಹಾಗೂ ಶ್ರೀಮಂತ ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣ ಮಾಡಲಿದೆ’ ಎಂದರು. ಈ ಸಂದರ್ಭದಲ್ಲಿ ರಾಜ್ಯ ಎನ್ಎಸ್ ಯುಐ ಘಟಕದ ಅಧ್ಯಕ್ಷರಾದ ಕೀರ್ತಿ ಗಣೇಶ್, ಉಪಾಧ್ಯಕ್ಷರಾದ ಜಯಂದ್, ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಹಾಗೂ ಫರೂಕ್, ರಫಿ, ರಾಷ್ಟ್ರೀಯ ಸಂಚಾಲಕರಾದ ಫಹದ್, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕರಾದ ಸಲೀಂ ಅವರು ಉಪಸ್ಥಿತರಿದ್ದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ರಾಜ್ಯಕ್ಕೆ ಮಾರಕ. ಈ ನೀತಿಯ ಬಗ್ಗೆ ಚರ್ಚೆ, ಸಂಶೋಧನೆ, ಸಂಸತ್, ಸದನದಲ್ಲಿ ಸಾಧಕ ಬಾಧಕದ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಈ ಚರ್ಚೆಯಾಗದೇ ಈ ನೀತಿ ಜಾರಿಯಾಗುತ್ತಿರುವುದು ದುರಾದೃಷ್ಟಕರ. ಎನ್ ಇಪಿಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಯಾವುದೇ ಶಿಕ್ಷಣ ನೀತಿ ಜಾರಿಗೆ ತರುವಾಗ ಅದಕ್ಕೆ ಮುನ್ನೋಟ, ದೂರದೃಷ್ಟಿ ಇರಬೇಕು, ಈ ಶಿಕ್ಷಣ ನೀತಿ ಅವೈಜ್ಞಾನಿಕವಾದುದು. ಈ ನೀತಿಯ ಕನ್ನಡ ಅವತರಣಿಕೆಯಲ್ಲಿ 11.1ರಲ್ಲಿ 7ನೇ ಶತಮಾನದಲ್ಲಿ ಬಾಣ ಭಟ್ಟ ಬರೆದ ಕೃತಿ ಕಾದಂಬರಿ ಆಧಾರಿತ 64 ವಿದ್ಯೆ ಕಲಿಸಿಕೊಡಲಾಗುವುದು ಎಂದು ಹೇಳಲಾಗಿದೆ. ಅಂದರೆ ಈ ಶಿಕ್ಷಣ ನೀತಿ ಕೇವಲ ಕಾಲ್ಪನಿಕ ಶಿಕ್ಷಣ ನೀತಿಯಾಗಿದ್ದು, ಇದು ಅವೈಜ್ಞಾನಿಕವಾಗಿದೆ ಎಂದರು.

ಮೋದಿ ಸರ್ಕಾರಬಂದ ನಂತರ 7 ವರ್ಷಗಳಿಂದ ಸರ್ವ ಶಿಕ್ಷಣ ಅಭಿಯಾನಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ. ಆ ಸಂದರ್ಭದಲ್ಲಿ ಈ ನೀತಿಯಿಂದ ಬಡವ ಹಾಗೂ ಶ್ರೀಮಂತ, ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣವಾಗಲಿದೆ. ಈ ನೀತಿಯಲ್ಲಿ ಆನ್ ಲೈನ್ ಶಿಕ್ಷಣವನ್ನು ಶೇ.20ರಿಂದ ಶೇ.50ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಈಗ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್, ಕಂಪ್ಯೂಟರ್ ತರಬೇತಿ ಇರುವ ಶಿಕ್ಷಕರು, ಅಅಂತರ್ಜಾಲ ವ್ಯವಸ್ಥೆ ಕೊರತೆ ಹೆಚ್ಚಾಗಿದೆ. ಒಂದು ವರದಿ ಪ್ರಕಾರ ದೇಶದ ಸರ್ಕಾರಿ ಶಾಲೆಗಳಲ್ಲಿ ಶೇ. 9.87 ರಷ್ಟು ಶಾಲೆಗಳಲ್ಲಿ ಮಾತ್ರ ಕಂಪ್ಯೂಟರ್ ಸೌಲಭ್ಯವಿದೆ. ದೇಶದಲ್ಲಿ ಕೇವಲ 4.09 ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ಇಂಟರ್ ನೆಟ್ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಕಂದಕ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

‘ಈ ನೀತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಎಲ್ಲಿಯೂ ಮೀಸಲಾತಿ, ವಿದ್ಯಾರ್ಥಿ ವೇತನ ವಿಚಾರವಾಗಿ ಉಲ್ಲೇಖ ಮಾಡಿಲ್ಲ. ಹೀಗಾಗಿ ಈ ವರ್ಗದ ವಿದ್ಯಾರ್ಥಿಗಳಿಗೆ ಮುಂದೆ ಯಾವ ರೀತಿ ಅನುಕೂಲವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಈ ನೀತಿಯಿಂದ ಖಾಸಗಿ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ಹಾಗೂ ಆಡಳಿತ ವಿಚಾರವಾಗಿ ಸ್ವಾಯತ್ತತೆ ನೀಡಲಾಗುವುದು. ಖಾಸಗಿ ಸಂಸ್ಥೆಗಳಿಗೆ ಈ ಅಧಿಕಾರ ನೀಡಿದರೆ, ಈಗಾಗಲೇ ಡೊನೆಷನ್ ಹಾವಳಿ ಹೆಚ್ಚಾಗಿರುವಾಗ ಇದು ಬಡವರನ್ನು ಶಿಕ್ಷಣ ಹೆಸರಿನಲ್ಲಿ ಸುಲಿಗೆ ಮಾಡಲು ಮುಂದಾಗುತ್ತಾರೆ. ಆಗ ಸರ್ಕಾರ ಶುಲ್ಕ ನಿಯಂತ್ರಣ ಮಾಡಲು ಸಾಧ್ಯವಿರುವುದಿಲ್ಲ.’ ಎಂದರು.

‘ಎನ್ ಡಿಎ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ಶಿಕ್ಷಣಕ್ಕೆ ದೇಶದ ಜಿಡಿಪಿಯಲ್ಲಿ ಶೇ.4.5 ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಕಳೆದ ಏಳು ವರ್ಷದಲ್ಲಿ ಕೇವಲ ಶೇ.3.5ಕ್ಕಿಂತ ಹೆಚ್ಚಿನ ಅನುದಾನ ನೀಡಿಲ್ಲ. ಈ ನೂತನ ಶಿಕ್ಷಣ ನೀತಿಯಲ್ಲಿ ಜಿಡಿಪಿಯ ಶೇ.6 ರಷ್ಟು ಹಣಕಾಸು ಅನುದಾನವನ್ನು ಶಿಕ್ಷಣಕ್ಕೆ ನೀಡಬೇಕು ಎಂದು ಹೇಳಿದೆ. ಆದರೆ ಬಿಜೆಪಿ ಸರ್ಕಾರ ಇದುವರೆಗೂ ಶೇ.3.5ಕ್ಕಿಂತ ಹೆಚ್ಚು ನೀಡದಿರುವಾಗ ಇದು ಹೇಗೆ ಸಾಧ್ಯವಾಗುತ್ತದೆ?’ ಎಂದು ಪ್ರಶ್ನಿಸಿದರು.

‘ನೂತನ ಶಿಕ್ಷಣ ನೀತಿಯ ಪ್ರಕಾರ ಪಠ್ಯಕ್ರಮ ಅಂತಿಮವಾಗಿಲ್ಲ, ಪಠ್ಯಪುಸ್ತಕ ಮುದ್ರಣವಾಗಿಲ್ಲ. ಈಗ ಆತುರದಲ್ಲಿ ಇದನ್ನು ಜಾರಿಗೊಳಿಸಲು ತಯಾರಿ ನಡೆಸುತ್ತಿದ್ದಾರೆ. ಈ ನೀತಿ ಶಿಕ್ಷಣವನ್ನು ಖಾಸಗಿಕರಣಗೊಳಿಸುವ ಹುನ್ನಾರವಾಗಿದೆ. ಈ ನೀತಿ ವ್ಯಾಪಕವಾಗಿ ಚರ್ಚೆ ಆಗಬೇಕು. ಲಾರ್ಡ್ ಮೆಕಾಲೆ ಅವರು ಜಾಗತಿಕ ಹಾಗೂ ಸಮಾನ ಶಿಕ್ಷಣ ನೀತಿಯನ್ನು ಈ ದೇಶಕ್ಕೆ ಕೊಟ್ಟಿದ್ದು, ಶ್ರೇಣಿ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಮನುವಾದಿ ಬಿಜೆಪಿಗರು ಈ ಶಿಕ್ಷಣ ನೀತಿಯನ್ನು ವಿರೋಧಿಸುತ್ತಾರೆ. ಈ ಶಿಕ್ಷಣ ನೀತಿ ವಿರುದ್ಧ ನಮ್ಮ ಎನ್ ಎಸ್ ಯುಐ ವಿಚಾರ ಸಂಕೀರ್ಣ, ಪ್ರತಿಭಟನೆ ಆಯೋಜಿಸಲಿದೆ. ಸರ್ಕಾರ ತಮ್ಮ ನಿರ್ಧಾರ ಕೈಬಿಟ್ಟು, ಈ ನೀತಿ ಬಗ್ಗೆ ಚರ್ಚೆಗೆ ಅವಕಾಶ ನೀಡಿ, ಇದಕ್ಕೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ನಂತರ ಇದನ್ನು ಜಾರಿಗೆ ತರಲು ಮುಂದಾಗಬೇಕು. ಇಲ್ಲದಿದ್ದರೆ ಇದು ಬಿಜೆಪಿ ಸರ್ಕಾರದ ಮ್ತೊಂದು ದುರಂತವಾಗಲಿದೆ. ಈಗಾಗಲೇ ನೋಟು ರದ್ದತಿ ಸೇರಿದಂತೆ ಅನೇಕ ದುರಂತಗಳಿಂದ ದೇಶ ನಲುಗುವಂತಾಗಿದೆ’ಎಂದರು.

Join Whatsapp
Exit mobile version