Home ಟಾಪ್ ಸುದ್ದಿಗಳು ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತುಕತೆಗೆ ಸಿದ್ಧ । ರಷ್ಯಾ ಘೋಷಣೆ

ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತುಕತೆಗೆ ಸಿದ್ಧ । ರಷ್ಯಾ ಘೋಷಣೆ

ಮಾಸ್ಕೋ: ಪ್ರಸಕ್ತ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವು ಜಾಗತಿಕವಾಗಿ ಮೂರನೇ ಮಹಾಯುದ್ಧದ ಆತಂಕ ಸೃಷ್ಟಿಸಿದ್ದು, ಉಕ್ರೇನ್ ಸೇನೆ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತುಕತೆಗೆ ಸಿದ್ಧವಿರುವುದಾಗಿ ರಷ್ಯಾ ಘೋಷಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೈ ಲಾವ್ ರೊವ್, ಪ್ರಸಕ್ತ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದ ಉಕ್ರೇನ್ ಅಧ್ಯಕ್ಷರ ಮಾತುಗಳೆಲ್ಲವೂ ಸುಳ್ಳು. ಉಕ್ರೇನ್ ಸೇನೆ ಶಸ್ತ್ರಾಸ್ತ್ರ ತ್ಯಜಿಸಿದರೆ ಅವರೊಂದಿಗೆ ಮಾತುಕತೆ ನಡೆಸಲು ಚಿಂತಿಸುವುದಾಗಿ ಅವರು ತಿಳಿಸಿದ್ದಾರೆ.

ಉಕ್ರೇನ್ ನಲ್ಲಿರುವ ಪ್ರಜಾಸತ್ತಾತ್ಮಕ ಸರ್ಕಾರ ಎಂದು ಒಪ್ಪಿಕೊಳ್ಳಲು ನಮಗೆ ಸಾಧ್ಯವಿಲ್ಲ. ನಾವು ಉಕ್ರೇನ್ ಮೇಲೆ ದಾಳಿ ನಡೆಸುವುದಿಲ್ಲ. ಉಕ್ರೇನ್ ಸರ್ಕಾರ ನಡೆಸುವ ದಬ್ಬಾಳಿಕೆಯನ್ನು ಕೊನೆಗೊಳಿಸಲು ಬಯಸುತ್ತಿದ್ದೇವೆ. ಉಕ್ರೇನ್ ಜನತೆ ಅನುಭವಿಸುತ್ತಿರುವ ಸಂಕಷ್ಟವನ್ನು ಇಲ್ಲದಾಗಿಸಿ ಸ್ವತಂತ್ರಗೊಳಿಸಲು ಯೋಜನೆ ರೂಪಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ವೈಮಾನಿಕ ಕಾರ್ಯಾಚರಣೆ ನಡೆಸಿಲ್ಲ ಎಂದು ರಷ್ಯಾ ಈ ವೇಳೆ ತಿಳಿಸಿದೆ. ಕೀವ್ ನಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸಿತ್ತು.

Join Whatsapp
Exit mobile version