ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ AI ಕ್ಯಾಮೆರಾ ಅಳವಡಿಸುವ ಮೂಲಕ ಮಿತಿಗಿಂತ ಅತಿಯಾಗಿ ವೇಗದಲ್ಲಿ ವಾಹನ ಚಲಾಯಿಸಿದರೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಇಂದಿನಿಂದ ಬೈಕ್, ಆಟೋ, ತ್ರಿಚಕ್ರ ವಾಹನ, ಟ್ಯಾಕ್ಟರ್ ಮತ್ತು ಮೋಟಾರ್ ರಹಿತ ವಾಹನಗಳನ್ನು ನಿಷೇಧಿಸಲಾಗಿದೆ. ಆದರೂ ಕೂಡ ನಿಯಮಗಳನ್ನು ಉಲ್ಲಂಘಿಸಿ ಜನರು ಎಕ್ಸಪ್ರೆಸ್ವೇ ನಲ್ಲಿ ಸಂಚರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರು ವೋಸ್ ಎಂಬ ಟ್ವಿಟರ್ ಬಳಕೆದಾರರು ವಿಡಿಯೋವೊಂದನ್ನು ಟ್ವಿಟ್ ಮಾಡಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೂಬಿನಕೆರೆ ಬಳಿ “ವಯಸ್ಸಾದ ವ್ಯಕ್ತಿಯೊಬ್ಬರು ದನಗಳೊಂದಿಗೆ ಎಕ್ಸ್ಪ್ರೆಸ್ವೇ ದಾಟುತ್ತಿರುವುದನ್ನು” ಕಾಣಬಹುದಾಗಿದೆ. ಒಂದು ವೇಳೆ ವೇಗವಾಗಿ ವಾಹನ ಬಂದು ಗುದ್ದಿದರೆ ಯಾರು ಹೊಣೆ? ನಿಯಮ ಬಾಹಿರವಾಗಿ ಏಕೆ ಹೆದ್ದಾರಿ ಮೇಲೆ ಸಂಚರಿಸುತ್ತಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಮತೊಬ್ಬ ಟ್ವಿಟರ್ ಬಳಕೆದಾರರಾದ ನರ್ಶಿಮಾ ಉಪಾಧ್ಯಾಯ ಅವರು ಕೂಡ ಇದೇ ರೀತಿಯಾಗಿ ವಿಡಿಯೋ ಟ್ವಿಟ್ ಮಾಡಿದ್ದು “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಎಕ್ಸ್ಪ್ರೆಸ್ವೇಯಲ್ಲಿ ಯು-ಟರ್ನ್ ತೆಗೆದುಕೊಳ್ಳುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರು “ಕೆಎಸ್ಆರ್ಟಿಸಿ ಚಾಲಕ ಜು.31ರಂದು ಬೆಳಗ್ಗೆ 8 ಗಂಟೆಗೆ ಬಿಡದಿ ಬಳಿ ರಿವರ್ಸ್ ತೆಗೆದುಕೊಂಡು ರಾಂಗ್ ಸೈಡ್ನಲ್ಲಿ ಹೋಗಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸಿದರೇ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸುವ ಅನೇಕ ಅಪಘಾತಗಳಿಗೆ ಯಾರು ಹೊಣೆ? ಎನ್ಹೆಚ್ಎಐ ಅಥವಾ ತಿಳುವಳಿಕೆ ಇಲ್ಲಿದ ಚಾಲಕನೆ?” ಎಂದು ಕೆಎಸ್ಆರ್ಟಿಸಿ, ಎನ್ಹೆಚ್ಎಐ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ KSRTC “ನಿಮ್ಮ ಟ್ವಿಟರ್ ದೂರನ್ನು ಪರಿಶೀಲಿಸಲು ಸಂಬಂಧಿಸಿದ ವಿಭಾಗಕ್ಕೆ ರವಾನಿಸಲಾಗಿದೆ.” ಅಲ್ಲದೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಪೊಲೀಸರು ತಿಳಿಸಿದ್ದಾರೆ.