ಪ್ರಾರ್ಥನೆಗೆ ಪ್ರತ್ಯೇಕ ಕೊಠಡಿ: ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ ಗದ್ದಲ

Prasthutha|

ರಾಂಚಿ: ನಮಾಝ್ ನಿರ್ವಹಿಸಲು ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡಿರುವ ವಿಷಯವನ್ನು ಮುಂದಿಟ್ಟು ಜಾರ್ಖಂಡ್ ವಿಧಾನಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿ ಸದಸ್ಯರು ತೀವ್ರ ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರ ನಡೆದಿದೆ.

ಅಧಿವೇಶನ ಆರಂಭವಾಗುವ ಮುನ್ನ ಬಿಜೆಪಿ ಶಾಸಕರು ವಿಧಾನಸೌಧದ ಪ್ರವೇಶದ್ವಾರದ ಮೆಟ್ಟಿಲುಗಳ ಮೇಲೆ ಕುಳಿತು ಹನುಮಾನ ಚಾಲೀಸಾ ಪಠಿಸಿ, ಹರೇ ರಾಮ್ ಘೋಷಣೆಗಳನ್ನು ಕೂಗಿದರು. ಕಲಾಪ ಆರಂಭವಾದ ತಕ್ಷಣ ಬಿಜೆಪಿ ಶಾಸಕರು ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಅಸೆಂಬ್ಲಿಯ ಬಾವಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಪ್ರತ್ಯೇಕ ನಮಾಝ್ ಕೊಠಡಿ ವ್ಯವಸ್ಥೆಗೊಳಿಸಿದ ಆದೇಶವನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು.

- Advertisement -

ಸ್ಪೀಕರ್ ರವೀಂದ್ರ ನಾಥ್ ಮಹತೋ ಅವರು ಭಾನು ಪ್ರತಾಪ್ ಶಾಹಿ ಸೇರಿದಂತೆ ಹಲವಾರು ಶಾಸಕರನ್ನು ತಮ್ಮ ಆಸನಗಳಿಗೆ ಹಿಂದಿರುಗಿ ಅಧ್ಯಕ್ಷರೊಂದಿಗೆ ಸಹಕರಿಸುವಂತೆ ಒತ್ತಾಯಿಸಿದರು. ಪಟ್ಟುಬಿಡದೆ ಬಿಜೆಪಿ ಶಾಸಕರು ಪ್ರತಿಭಟನೆ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಭಾನುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸ್ಪೀಕರ್ ಅವರ ಪ್ರತಿಕೃತಿಯನ್ನು ದಹಿಸಿದ್ದರು.

ನಮಾಝ್ ನಿರ್ವಹಣೆ ಮಾಡುವ ಸಲುವಾಗಿ ಸ್ಪೀಕರ್ ಕೊಠಡಿ ಸಂಖ್ಯೆ 348 ಯನ್ನು ವ್ಯವಸ್ಥೆಗೊಳಿಸಿದ್ದರು. ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಅಸೆಂಬ್ಲಿ ಆವರಣದಲ್ಲಿ ಹನುಮಾನ್ ದೇವಸ್ಥಾನ ಮತ್ತು ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.

- Advertisement -