Home ಟಾಪ್ ಸುದ್ದಿಗಳು ಆರ್‌ಟಿಐ ಕಾರ್ಯಕರ್ತನ ಥಳಿಸಿ ಹತ್ಯೆ

ಆರ್‌ಟಿಐ ಕಾರ್ಯಕರ್ತನ ಥಳಿಸಿ ಹತ್ಯೆ

ಉತ್ತರ ಪ್ರದೇಶ: ಸಾರ್ವಜನಿಕ ಯೋಜನೆಗಳ ಗುಣಮಟ್ಟದ ಮಾಹಿತಿ ಕೇಳಿದ್ದಕ್ಕಾಗಿ ಆರ್‌ಟಿಐ ಕಾರ್ಯಕರ್ತನನ್ನು ಗ್ರಾಮದ ಮುಖ್ಯಸ್ಥ, ಆತನ ಮಗ ಸೇರಿದಂತೆ ಎಂಟು ಮಂದಿ ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಘಟನೆಯಲ್ಲಿ ಮೃತನ ಸಹೋದರನಿಗೂ ತೀವ್ರ ಗಾಯಗಳಾಗಿದೆ.

ಇಗ್ಲಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ಗೊರೈ ಗ್ರಾಮದ ನಿವಾಸಿ ದೇವಜೀತ್ ಸಿಂಗ್ ಮತ್ತು ಆತನ ಸಹೋದರ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದೇವಜೀತ್ ಸಿಂಗ್ ಎಂಬಾತನನ್ನು ಥಳಿಸಿ ಕೊಲೆಗೈಯ್ಯಲಾಗಿದೆ ಎಂದು ಮೃತರ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಧಾನ್ ದೇವೇಂದ್ರ ಸಿಂಗ್, ಮಗ ಕಾರ್ತಿಕ್ ಮತ್ತು ಇತರ ಆರು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 302, 147, 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ರಾಘವೇಂದ್ರ ಸಿಂಗ್ ತಿಳಿಸಿದ್ದಾರೆ.

ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮೃತ ಆರ್‌ಟಿಐ ಕಾರ್ಯಕರ್ತ ದೇವಜೀತ್ ಅವರ ತಂದೆ ಮಹೇಂದ್ರ ಸಿಂಗ್, ನನ್ನ ಮಗ ಎರಡು ತಿಂಗಳ ಹಿಂದೆ ಗ್ರಾಮದ ಮುಖ್ಯಸ್ಥ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮಾಹಿತಿ ಕೋರಿ ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದ. ಅಲ್ಲದೆ, ಗ್ರಾಮದಲ್ಲಿ ಕಾಮಗಾರಿಗೆ ಗುಣಮಟ್ಟವಲ್ಲದ ಸಾಮಗ್ರಿಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದ. ಅಂದಿನಿಂದ ನಮಗೆ ಕೊಲೆ ಬೆದರಿಕೆ ಕರೆ ಬರುತ್ತಿತ್ತು. ಈ ಸಂಬಂಧ ದೇವೇಂದ್ರ ವಿರುದ್ಧ ದೂರು ನೀಡಲು ನಾವು ಪೊಲೀಸರನ್ನು ಭೇಟಿಯಾಗಿದ್ದೆವು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ದೇವಜೀತ್ ತನ್ನ ತಂದೆಗೆ ಕೃಷಿ ಚಟುವಟಿಕೆಗಳಲ್ಲಿ ಬೆಂಬಲ ನೀಡುವುದರ ಜೊತೆಗೆ ಗ್ರಾಮದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದರು. ಆತ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಅಗಲಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Join Whatsapp
Exit mobile version