ಅಹ್ಮದಾಬಾದ್: 2022ರ ಅಕ್ಟೋಬರ್’ನಲ್ಲಿ ಮೊರ್ಬಿಯಲ್ಲಿ ನಡೆದ ತೂಗುಸೇತುವೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಿ ಎಂದು ಗುಜರಾತ್ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ದುರಂತದಲ್ಲಿ 135 ಜನರು ಮೃತಪಟ್ಟು ನೂರಾರು ಜನರು ಗಾಯಗೊಂಡಿದ್ದರು. ಸುಮೋಟೊ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುಜರಾತ್ ಉಚ್ಚ ನ್ಯಾಯಾಲಯವು ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ರೂ. 10 ಲಕ್ಷ ಮತ್ತು ಗಾಯಗೊಂಡವರಿಗೆ ರೂ. 2 ಲಕ್ಷ ಪರಿಹಾರವನ್ನು ಕೂಡಲೆ ನೀಡುವಂತೆ ಮೆಸರ್ಸ್ ಅಜಂತ ಕಂಪೆನಿಗೆ ಮಧ್ಯಂತರ ಆದೇಶದಲ್ಲಿ ಹೇಳಿತು.
ಮೆಸರ್ಸ್ ಅಜಂತ ಕಂಪೆನಿಯು ಮೊರ್ಬಿ ತೂಗು ಸೇತುವೆ ತುಂಡಾಗಿ ಬೀಳುವುದಕ್ಕೆ ಮೊದಲು ಅದನ್ನು ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಯಾಗಿದೆ. ಮುಖ್ಯ ನ್ಯಾಯಾಧೀಶರಾದ ಸೋನಿಯಾ ಗೋಕನಿ ಮತ್ತು ಜಸ್ಟಿಸ್ ಸಂದೀಪ್ ಎನ್. ಭಟ್ಟ್ ಅವರಿದ್ದ ನ್ಯಾಯ ಪೀಠವು ಈ ಮಧ್ಯಂತರ ಆದೇಶ ನೀಡಿತು.
ಅಜಂತ ಗುಂಪು ಸಂಸ್ಥೆ ಹಾಗೂ ಒರೇವಾ ಗುಂಪು ಎಂಬ ಹೆಸರನ್ನೂ ಹೊಂದಿರುವ ಗುಂಪಿನ ಎಂಡಿಯವರು ಕೋರ್ಟಿಗೆ ಸತ್ತವರ ಕುಟುಂಬಕ್ಕೆ ರೂ. 5 ಲಕ್ಷ ಹಾಗೂ ಗಾಯಗೊಂಡಿರುವ 56 ಮಂದಿಗೆ ತಲಾ ರೂ. 1 ಲಕ್ಷ ಪರಿಹಾರ ನೀಡುವುದಾಗಿ ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.
ಈಗಾಗಲೇ ಸತ್ತವರ ಕುಟುಂಬಕ್ಕೆ ರೂ. 8 ಲಕ್ಷ ಹಾಗೂ ಪ್ರಧಾನಿ ಪರಿಹಾರ ನಿಧಿಯಿಂದ ರೂ. 2 ಲಕ್ಷ ನೀಡಿರುವುದಾಗಿ ಗುಜರಾತ್ ಸರಕಾರವು ಕೋರ್ಟಿಗೆ ವರದಿ ನೀಡಿತು.