Home ಟಾಪ್ ಸುದ್ದಿಗಳು ವಿಧಾನಸೌಧದಲ್ಲಿ 10 ಲಕ್ಷ ರೂಪಾಯಿ ಪತ್ತೆ: ಸಿ.ಸಿ.ಪಾಟೀಲ್ ವಿರುದ್ಧ ತನಿಖೆಗೆ ಎಎಪಿ ಆಗ್ರಹ

ವಿಧಾನಸೌಧದಲ್ಲಿ 10 ಲಕ್ಷ ರೂಪಾಯಿ ಪತ್ತೆ: ಸಿ.ಸಿ.ಪಾಟೀಲ್ ವಿರುದ್ಧ ತನಿಖೆಗೆ ಎಎಪಿ ಆಗ್ರಹ

ಬೆಂಗಳೂರು: ವಿಧಾನಸೌಧದಲ್ಲಿ ಅಧಿಕಾರಿಯೊಬ್ಬರ ಬಳಿ 10 ಲಕ್ಷ ರೂಪಾಯಿ ನಗದು ಸಿಕ್ಕಿರುವುದಕ್ಕೆ ಸಂಬಂಧಿಸಿ ಅಧಿಕಾರಿ ಜೆ.ಜಗದೀಶ್ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿರುದ್ಧ ಸೂಕ್ತ ತನಿಖೆ ಆಗಬೇಕೆಂದು ಆಮ್ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಆಗ್ರಹಿಸಿದ್ದಾರೆ.


ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಮಥಾಯಿ, “ವಿಧಾನಸೌಧಕ್ಕೆ ತೆರಳುತ್ತಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜೆ.ಜಗದೀಶ್ ಬಳಿ ಹತ್ತು ಲಕ್ಷ ರೂಪಾಯಿ ಪತ್ತೆಯಾಗಿದೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಅವರ ಆಪ್ತ ಕಾರ್ಯದರ್ಶಿಯ ಹೆಸರನ್ನು ಬಾಯ್ಬಿಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅದು ಗುತ್ತಿಗೆ ಕಾಮಗಾರಿಯ 40% ಕಮಿಷನ್ ಹಣವೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು” ಎಂದು ಒತ್ತಾಯಿಸಿದರು.


“ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧಕ್ಕೆ ರಾಜ್ಯದ ಆಡಳಿತದಲ್ಲಿ ಪವಿತ್ರವಾದ ಸ್ಥಾನವಿದೆ. ಆದರೆ ಭ್ರಷ್ಟ ಬಿಜೆಪಿ ಸರ್ಕಾರವು ವಿಧಾನಸೌಧವನ್ನು 40% ಕಮಿಷನ್ ದಂಧೆಗೆ ಬಳಸಿ, ಅದರ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ. ಸಚಿವರು, ಶಾಸಕರು, ಅಧಿಕಾರಿಗಳು ವಿಧಾನಸೌಧವನ್ನು ಭ್ರಷ್ಟಾಚಾರದ ಡೀಲ್ ಕುದುರಿಸುವ ಹಾಗೂ ಅಕ್ರಮ ಹಣವನ್ನು ವಿನಿಮಯ ಮಾಡಿಕೊಳ್ಳುವ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರು ಇವೆಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ” ಎಂದು ಕೆ.ಮಥಾಯಿ ಆರೋಪಿಸಿದರು.


“ಬಂಧಿತ ಆರೋಪಿ ಜೆ.ಜಗದೀಶ್’ಗೆ ಆ ಹಣವನ್ನು ಕೊಟ್ಟವರು ಯಾರು? ಆತ ಅದನ್ನು ವಿಧಾನಸೌಧಕ್ಕೆ ಏಕೆ ತೆಗೆದುಕೊಂಡು ಬಂದಿದ್ದ? ಅಲ್ಲಿ ಯಾರಿಗೆ ಆ ಹಣವನ್ನು ಕೊಡಲು ಬಂದಿದ್ದ? ಅದು ಯಾವ ಗುತ್ತಿಗೆ ಕಾಮಗಾರಿಯ ಕಮಿಷನ್? ಎಂಬ ಅನೇಕ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಪೊಲೀಸರು ಶೀಘ್ರವೇ ತನಿಖೆಯನ್ನು ಪೂರ್ಣಗೊಳಿಸಿ ಜನರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ನೀಡಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿ ಹಾಕಬಾರದು” ಎಂದು ಕೆ.ಮಥಾಯಿ ಹೇಳಿದರು.

Join Whatsapp
Exit mobile version