Home ಟಾಪ್ ಸುದ್ದಿಗಳು ರಾಜ್ಯದ 224 ಕ್ಷೇತ್ರಗಳಲ್ಲಿ ಆರ್’ಪಿಐಬಿ ಅಭ್ಯರ್ಥಿಗಳು ಕಣಕ್ಕೆ; ಎನ್. ಮೂರ್ತಿ

ರಾಜ್ಯದ 224 ಕ್ಷೇತ್ರಗಳಲ್ಲಿ ಆರ್’ಪಿಐಬಿ ಅಭ್ಯರ್ಥಿಗಳು ಕಣಕ್ಕೆ; ಎನ್. ಮೂರ್ತಿ

ಬೆಂಗಳೂರು: ಇದೇ ಜನವರಿ 26ರಂದು ಆರ್’ಪಿಐಬಿ ಚಿಹ್ನೆಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಚುನಾವಣಾ ಆಯೋಗ ಉತ್ತಮ ಚಿಹ್ನೆಯನ್ನು ಪಕ್ಷಕ್ಕೆ ನೀಡಿದೆ ಎಂದು ಆರ್ ಪಿ ಐ ಬಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಎನ್ ಮೂರ್ತಿ ತಿಳಿಸಿದರು.


ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಆರ್ ಪಿಐಬಿ ಪಕ್ಷ ರಾಜ್ಯದ ಎಲ್ಲ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ದೆ ನಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.


ದೇಶದ ಬಗ್ಗೆ ಅಭಿಮಾನ, ದೇಶಭಕ್ತಿ ಇಲ್ಲದವರು ಸಂವಿಧಾನವನ್ನು ವಿರೋಧಿಸುವ ಕಾರ್ಯ ಮಾಡುತ್ತಿದ್ದಾರೆ. ಕೇವಲ ಹಿಂದುತ್ವವನ್ನು ಪ್ರತಿಪಾದಿಸುವ ಮೂಲಕ ಜನರನ್ನು ಒಡೆದು ಅಳುವ ನೀತಿ ಅನುಸರಿಸುತ್ತಿದ್ದಾರೆ. ಸ್ವತಂತ್ರ ನಂತರ ದೇಶವನ್ನಾಳಿದ ಪಕ್ಷಗಳು ಸ್ವಜನಪಕ್ಷಪಾತ, ಸ್ವಾರ್ಥ, ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಹೇಳಿದರು.


ಕೇಂದ್ರ ಸರ್ಕಾರ ಜಿಎಸ್’ಟಿ ತೆರಿಗೆ ಮೂಲಕ ಬಡವರು, ಮಧ್ಯಮ ವರ್ಗದವರ ಮೇಲೆ ಬರೆ ಹಾಕಿ ಸುಮಾರು ಐದು ಲಕ್ಷ ಕೋಟಿಯಷ್ಟು ಜಿಎಸ್’ಟಿ ಹಣ ಎಲ್ಲಿ ಹೋಯಿತು ಎಂಬ ಬಗ್ಗೆ ಇನ್ನು ಯಕ್ಷ ಪ್ರಶ್ನೆಯಾಗಿದೆ. ಕೇವಲ ಉದ್ಯಮಿಗಳ ಹದಿನಾಲ್ಕುವರೆ ಸಾವಿರ ಕೋಟಿ ರೂಪಾಯಿ ಸಾಲ ಹಣವನ್ನು ಮನ್ನಾ ಮಾಡಲಾಗಿದೆ. ಆದರೆ ಬಡವರು ಸಾಲಗಾರರಾಗಿಯೇ ಉಳಿದಿದ್ದಾರೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯ ಮಾಡುತ್ತಿದ್ದೀರಿ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಈಗ ತಿಂಗಳಿಗೆ ಎರಡು ಮೂರು ಸಲ ಭೇಟಿ ನೀಡುತ್ತಾರೆ. ಕೇವಲ ಅಭಿವೃದ್ಧಿ ವಿಚಾರದಲ್ಲಿ ಕಮಿಶನ್ ಪಡೆಯುವ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಜನರ ಉದ್ಧಾರ ಇವರಿಗೆ ಬೇಕಿಲ್ಲ ಎಂದು ಆರೋಪಿಸಿದರು.


ಆರ್ ಪಿಐಬಿ ಪಕ್ಷ ಹೊಸದಾಗಿದ್ದರೂ ತನ್ನದೇ ಅಸ್ತಿತ್ವವನ್ನು ಹೊಂದಿದೆ. ಈ ಪಕ್ಷಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ. ಆರ್ ಪಿ ಐ ಬಿ ಪಕ್ಷ ಏಳು ಬಣ್ಣಗಳನ್ನು ಒಳಗೊಂಡ ವಿಬ್ ಗಯಾರ್ ಚಿಹ್ನೆಯನ್ನು ಹೊಂದಲಿದೆ. ಸಂವಿಧಾನ ದಿನ ಆಚರಣೆ ಸಂದರ್ಭದಲ್ಲಿ ಈ ಮಹತ್ವದ ಚಿಹ್ನೆ ಬಿಡುಗಡೆ ಗೊಳಿಸಲಾಗುವುದು. ಈ ಕಾರ್ಯಕ್ರಮ ಬೆಂಗಳೂರಿನ ಲಿಡ್ಕರ್ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.

Join Whatsapp
Exit mobile version