Home ಟಾಪ್ ಸುದ್ದಿಗಳು ರೌಡಿ ಬಬ್ಲಿ ಕೊಲೆ: ಆರೋಪಿಗಳ ಕಾಲಿಗೆ ಗುಂಡಿಕ್ಕಿ ಬಂಧನ

ರೌಡಿ ಬಬ್ಲಿ ಕೊಲೆ: ಆರೋಪಿಗಳ ಕಾಲಿಗೆ ಗುಂಡಿಕ್ಕಿ ಬಂಧನ

ಬೆಂಗಳೂರು,ಜು.21-ಹಾಡಹಗಲೇ ಬ್ಯಾಂಕ್ ಗೆ ನುಗ್ಗಿ ಪತ್ನಿ ಮಗನ ಎದುರೇ ರೌಡಿ ಬಬ್ಲಿಯನ್ನು‌ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ ಇಬ್ಬರು ರೌಡಿಗಳಿಗೆ ಬುಧವಾರ ಬೆಳ್ಳಂಬೆಳಿಗ್ಗೆ ಆಗ್ನೇಯ ವಿಭಾಗದ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.


ಪೊಲೀಸರ ಗುಂಡೇಟು‌ ತಿಂದಿರುವ ಜೆ.ಸಿ.ನಗರ ಠಾಣೆಯ ರೌಡಿ ರವಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆಯ ರೌಡಿ ಪ್ರದೀಪ್‌ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.
ಆರೋಪಿಗಳು ತಪ್ಪಿಸಿಕೊಳ್ಳಲು ಹೋದಾಗ ಬೆನ್ನಟ್ಟಿ ಹಿಡಿಯಲು ಹೋದ ಪಿಎಸ್ ಐ ಸಿದ್ದಪ್ಪ ಹಾಗೂ ಎಎಸ್ ಐ ರವೀಂದ್ರ ಮೇಲೆ ಹಲ್ಲೆ ನಡೆಸಿದ್ದು ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಹಾಡಹಗಲೇ ಕೊಲೆ:
ಕಳೆದ ಜು.19ರಂದು ಮಧ್ಯಾಹ್ನ 1.30ರ ವೇಳೆ ಆಡುಗೋಡಿ ಪೊಲೀಸ್ ಠಾಣೆಯ ರೌಡಿ ದ್ವಿಚಕ್ರ ವಾಹನದಲ್ಲಿ ಪತ್ನಿ, ಮಗನ ಜತೆ ಕೋರಮಂಗಲದ 8ನೇ ಬ್ಲಾಕ್ ನ ಯೂನಿಯನ್‌ ಬ್ಯಾಂಕ್‌ ಶಾಖೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಎಂಟು ಮಂದಿ ಮುಸುಕುಧಾರಿಗಳು ಹಿಂಬಾಲಿಸಿದ್ದಾರೆ.
ಇದನ್ನು ಗಮನಿಸಿದ ಬಬ್ಲಿ, ವೇಗವಾಗಿ ಹೋಗಿ ಬ್ಯಾಂಕ್‌ ಮುಂದೆ ವಾಹನ ನಿಲ್ಲಿಸಿ ಬ್ಯಾಂಕ್‌ ನೊಳಗೆ ಓಡಿದರೂ ಬೆನ್ನಟ್ಟಿದ ಆರೋಪಿಗಳು ಮ್ಯಾನೇಜರ್‌ ಕೊಠಡಿಗೆ ನುಗ್ಗಿ ಬಬ್ಲಿ ಮೇಲೆ ಮಾರ ಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು.
ಆಗ ಪತ್ನಿ ಪತಿಯ ನೆರವಿಗೆ ಧಾವಿಸಿದರೂ ಬಿಡದ ಆರೋಪಿಗಳು, ಆಕೆಯನ್ನು ಕೊಠಡಿಯಿಂದ ಹೊರ ದಬ್ಬಿ ಬರ್ಬರವಾಗಿ ಕೊಲೆ ಮಾಡಿ ಅಲ್ಲಿದ್ದವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಪರಾರಿಯಾಗಿದ್ದಾರೆ.
ಘಟನೆ ವೇಳೆ ಬಬ್ಲಿ ಪತ್ನಿಯ ಕೈ ಬೆರಳುಗಳು ತುಂಡಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ‌ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಠಾಣೆ ಇನ್ಸ್ಪೆಕ್ಟರ್ ರವಿ ನೇತೃತ್ವತದ ವಿಶೇಷ ತಂಡ ಆರೋಪಿಗಳಿಗಾಗಿ ಶೋಧ ನಡೆಸುತ್ತಿತ್ತು.


ಕಮಿಷನರ್ ಎಚ್ಚರಿಕೆ:
ಈ ನಡುವೆ ನಿನ್ನೆ ರಾತ್ರಿ ಕಮಿಷನರ್ ಕಮಲ್ ಪಂತ್, ಕೋರಮಂಗಲ ಠಾಣೆಗೆ ದಿಢೀರ್ ಭೇಟಿ ನೀಡಿ ಬಬ್ಲಿ ಕೊಲೆ ಕೃತ್ಯದ ಬಗ್ಗೆ ಮಾಹಿತಿ ಪಡೆದರು.
ಜನನಿಬಿಡ ಪ್ರದೇಶದಲ್ಲಿ ಕೊಲೆ ನಡೆದಿದ್ದರಿಂದ ಸುತ್ತಮುತ್ತ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಒಂದು ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ಇನ್‌ ಸ್ಪೆಕ್ಟರ್‌ ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಕಮಿಷನರ್, ‘ಮುಂದಿನ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕು ಇಲ್ಲದಿದ್ದರೆ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದರು.
ಮಾರಕಾಸ್ತ್ರ ಹಿಡಿದು ಮಧ್ಯಾಹ್ನವೇ ಬ್ಯಾಂಕ್‌ ಗೆ ನುಗ್ಗಿ ಹತ್ಯೆ ಮಾಡುತ್ತಾರೆ ಎಂದರೆ ಏನು ಅರ್ಥ. ಠಾಣೆ ವ್ಯಾಪ್ತಿಯ ರೌಡಿಗಳ ಮೇಲೆ ನಿಗಾ ಇರಿಸಬೇಕು. ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಬೇಕಾದ ನೀವು ಹಾಗೂ ನಿಮ್ಮ ಸಿಬ್ಬಂದಿ ಏನು ಮಾಡುತ್ತಿದ್ದೀರಾ?’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿ ಇಂಥ ಘಟನೆಗಳು ಮರು ಕಳಿಸಿದರೆ ಠಾಣಾಧಿಕಾರಿಯನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.


ರಾತ್ರಿಯೇ ಮಾಹಿತಿ:
ರೌಡಿ ಬಬ್ಲಿ ಕೊಲೆಗೈದು ಪರಾರಿಯಾಗಿದ್ದ ರೌಡಿ ರವಿ ಹಾಗೂ ಪ್ರದೀಪ್ ಬೇಗೂರು ಬಳಿ‌ಯ ನಿರ್ಜನ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯನ್ನು ಇಂದು ಮುಂಜಾನೆ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಬಂಧಿಸಲು ಹೋಗಿದ್ದಾರೆ.
ಪೊಲೀಸ್ ಜೀಪ್ ಕಂಡ ತಕ್ಷಣವೇ ಇಬ್ಬರು ರೌಡಿಗಳು ಓಡಲು ಯತ್ನಿಸಿದ್ದು ಅವರನ್ನು ಬೆನ್ನಟ್ಟಿ ಹಿಡಿಯಲು ಹೋದ ಪಿಎಸ್ ಐ ಸಿದ್ದಪ್ಪ ಹಾಗೂ‌ ಎಎಸ್ಐ ರವೀಂದ್ರ ಎಂಬುವವರ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ‌.

ಶರಣಾಗುವಂತೆ ಸೂಚಿಸಿದರೂ ಕ್ಯಾರೆ ಅನ್ನದ ಆರೋಪಿಗಳು ಹಲ್ಲೆ ಮುಂದುವರೆಸಿದಾಗ ಪ್ರಾಣ ರಕ್ಷಣೆಗಾಗಿ ಇನ್ಸ್ ಪೆಕ್ಟರ್ ರವಿ ಹಾಗೂ ಪಿಎಸ್ಐ ಪುಟ್ಟಸಾಮಯ್ಯ ಅವರು ತಲಾ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ.
ಆದನ್ನು ಆರೋಪಿಗಳು ಲೆಕ್ಕಿಸದಿದ್ದಾಗ ಮತ್ತೊಂದು ಗುಂಡು ಹಾರಿಸಿದ್ದು ಅವು ಕಾಲುಗಳಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಇಬ್ಬರನ್ನು ಬಂಧಿಸಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.
ರೌಡಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ವಿಚಾರಣೆ ನಡೆಸಿ ಬಬ್ಲಿ ಕೊಲೆಗೆ ನಿಖರ ಕಾರಣ ಪತ್ತೆಹಚ್ಚಲಿದ್ದು ಕೃತ್ಯದಲ್ಲಿ ಭಾಗಿಯಾಗಿರುವ ಉಳಿದವರ ಬಂಧನಕ್ಕೆ ಶೋಧ ನಡೆಸಲಾಗುವುದು ಎಂದು ಹೇಳಿದರು.

Join Whatsapp
Exit mobile version