Home ಕ್ರೀಡೆ ರೋಹಿತ್‌ ಶರ್ಮಾ ಅಲಭ್ಯ: ಭಾರತ ಟೆಸ್ಟ್ ತಂಡಕ್ಕೆ ಜಸ್‌ ಪ್ರೀತ್ ಬುಮ್ರಾ ನಾಯಕ

ರೋಹಿತ್‌ ಶರ್ಮಾ ಅಲಭ್ಯ: ಭಾರತ ಟೆಸ್ಟ್ ತಂಡಕ್ಕೆ ಜಸ್‌ ಪ್ರೀತ್ ಬುಮ್ರಾ ನಾಯಕ

ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮಾಗೆ ಕೋವಿಡ್‌ ಸೋಂಕು ತಗುಲಿರುವ ಹಿನ್ನಲೆಯಲ್ಲಿ, ಜುಲೈ 1ರಿಂದ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ 35 ವರ್ಷದ ಬಳಿಕ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಮೊದಲ ವೇಗದ ಬೌಲರ್ ಎಂಬ ಖ್ಯಾತಿಗೆ ಬೂಮ್ರಾ ಪಾತ್ರರಾಗಲಿದ್ದಾರೆ.


1987ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕಪಿಲ್ ದೇವ್ ಅವರು ಭಾರತ ತಂಡವನ್ನು ಮುನ್ನಡೆಸಿದ್ದರು. ಇದು ಸುನಿಲ್ ಗವಾಸ್ಕರ್ ಅವರ ವೃತ್ತಿ ಜೀವನದ ಅಂತಿಮ ಟೆಸ್ಟ್ ಪಂದ್ಯವಾಗಿತ್ತು. ಮತ್ತೊಂದು ವಿಶೇಷವೆಂದರೆ ಇದೀಗ ಅಲಭ್ಯರಾಗಿರುವ ರೋಹಿತ್ ಶರ್ಮಾ, ಆ ವೇಳೆ ಹುಟ್ಟಿರಲಿಲ್ಲ.
ಇದರೊಂದಿಗೆ ಪ್ರಸಕ್ತ ವರ್ಷದಲ್ಲಿ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿರುವ 6ನೇ ನಾಯಕ ಎಂಬ ಹೆಗ್ಗಳಿಕೆಯೂ ಬುಮ್ರಾ ಅವರದ್ದಾಗಲಿದೆ. ಇದು ದಾಖಲೆಯಾಗಿದ್ದು, ಈ ಹಿಂದೆ 1959ರಲ್ಲಿ ಟೀಮ್‌ ಇಂಡಿಯಾ, ವರ್ಷವೊಂದರಲ್ಲಿ ಐವರು ನಾಯಕತ್ವದಡಿಯಲ್ಲಿ ಆಡಿತ್ತು.


ಲಿಸೆಸ್ಟರ್‌ ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ಮೂರನೇ ದಿನದಂದು ರೋಹಿತ್ ಶರ್ಮಾ ಅವರ ಕೊರೊನಾ ಪರೀಕ್ಷೆಯ ವರದಿ ಪಾಸಿಟಿವ್ ಬಂದಿತ್ತು. ಶರ್ಮಾ ಪ್ರಸ್ತುತ ಹೋಟೆಲ್‌ ಕ್ವಾರೈಂಟೈನ್‌ನಲ್ಲಿದ್ದಾರೆ. ರೋಹಿತ್ ಅವರ ಸ್ಥಾನಕ್ಕೆ ಕನ್ನಡಿಗ ಮಯಂಕ್ ಅಗರವಾಲ್ ಆಯ್ಕೆಯಾಗಿದ್ದು, ಮಯಾಂಕ್‌ ಈಗಾಗಲೇ ಇಂಗ್ಲೆಂಡ್‌ ತಲುಪಿದ್ದಾರೆ. ಕೋವಿಡ್‌ನಿಂದಾಗಿ ಕಳೆದ ವರ್ಷ ಮುಂದೂಡಲ್ಪಟ್ಟಿದ್ದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಅಂತಿಮ ಪಂದ್ಯ ಎಜ್‌ಬಾಸ್ಟನ್ ಮೈದಾನದಲ್ಲಿ ಜುಲೈ 1ರಿಂದ ಆರಂಭವಾಗಲಿದೆ.

Join Whatsapp
Exit mobile version