ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಅಫ್ಗಾನಿಸ್ತಾನ ಹಾಗೂ ಭಾರತ ನಡುವಿನ ಟಿ20 ಪಂದ್ಯದಲ್ಲಿ ಭಾರತ ತಂಡದ ರೋಹಿತ್ ಶರ್ಮಾ ಮೂರು ದಾಖಲೆ ಬರೆದಿದ್ದಾರೆ.
ಅಫ್ಗನ್ ತಂಡವು ಭಾರತದ ಎದುರು ಆಡಿದ ಚೊಚ್ಚಲ ಟಿ20 ಸರಣಿಯಲ್ಲಿ ಆತಿಥೇಯ ಬಳಗವು 3-0ಯಿಂದ ಕ್ಲೀನ್ಸ್ವೀಪ್ ಜಯಸಾಧಿಸಿದೆ. ಜೊತೆಗೆ ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸಿದ್ದಾರೆ. ಇದೇ ಪಂದ್ಯ ರೋಹಿತ್ ಶರ್ಮಾ 3 ಹೊಸ ದಾಖಲೆಗೆ ಸಾಕ್ಷಿಯಾಗಿದೆ.
ವಿರಾಟ್ ಕೊಹ್ಲಿ ದಾಖಲೆಯನ್ನು ತನ್ನ ಹೆಸರಿಗೆ ಬರೆದ ರೋಹಿತ್
ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ 1570 ರನ್ ಕಲೆಹಾಕಿದ್ದಾರೆ. ರೋಹಿತ್ ಶರ್ಮಾ ಈ ದಾಖಲೆಯನ್ನು ಮುರಿದು ಭಾರತದ ಪರ ನಾಯಕನಾಗಿ ಅತ್ಯಧಿಕ ರನ್ಗಳಿಸಿದ ಆಟಗಾರ ಎಂಬ ಶ್ರೇಯ ಪಡೆದಿದ್ದಾರೆ.
ರೋಹಿತ್ 44ರನ್ ಗಳಿಸುತ್ತಿದ್ದಂತೆ ವಿರಾಟ್ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ರೋಹಿತ್ ನಾಯಕನಾಗಿ ಒಟ್ಟು 1647 ರನ್ ಕಲೆಹಾಕಿದ್ದಾರೆ.
ಜೊತೆಯಾಟದ ದಾಖಲೆ
ಯುವ ಆಟಗಾರ ರಿಂಕು ಸಿಂಗ್ ಮತ್ತು ರೋಹಿತ್ 5ನೇ ವಿಕೆಟ್ಗೆ ಅಜೇಯ 190 ರನ್ ಜೊತೆಯಾಟ ನಡೆಸಿರುವುದು ದಾಖಲೆಯಾಗಿದೆ. ಭಾರತ ಪರ ಅತ್ಯಧಿಕ ಜತೆಯಾಟ ನಡೆಸಿದ ಮೊದಲ ಜೋಡಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ಅವರ ಹೆಸರಿನಲ್ಲಿ ಇತ್ತು. 2022ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಂಜು ಮತ್ತು ಹೂಡಾ 176 ರನ್ಗಳ ಜೊತೆಯಾಟ ನಡೆಸಿದ್ದರು.ರಿಂಕು ಸಿಂಗ್ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. 38 ಎಸೆತ ಎದುರಿಸಿ ಅಜೇಯ 63 ರನ್ ಗಳಿಸಿದರು. ಇದರಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿ ಇದ್ದವು.
ಶತಕದ ಜೊತೆಯಾಟ
ರೋಹಿತ್ ಶರ್ಮಾ 69 ಎಸೆತಗಳಿಂದ ಅಜೇಯ 121 ರನ್ ಬಾರಿಸಿ ಶತಕ ಹೊಡೆದಿದ್ದು, ಇದರಲ್ಲಿ 8 ಸಿಕ್ಸರ್ ಮತ್ತು 11 ಬೌಂಡರಿಗಳಿದ್ದವು. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ರೋಹಿತ್ ಅವರು 5 ಶತಕಗಳನ್ನು ಬಾರಿಸಿದ್ದಾರೆ. 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿ, ಮೂರು ಶತಕ ಬಾರಿಸಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ 3ನೇ ಸ್ಥಾನದಲ್ಲಿದ್ದಾರೆ.