Home ಕರಾವಳಿ MRPL ಕಾರಿಡಾರ್ ರಸ್ತೆಯ ಗುಂಡಿ ಮುಚ್ಚಲು ಒತ್ತಾಯಿಸಿ ರಸ್ತೆ ತಡೆ

MRPL ಕಾರಿಡಾರ್ ರಸ್ತೆಯ ಗುಂಡಿ ಮುಚ್ಚಲು ಒತ್ತಾಯಿಸಿ ರಸ್ತೆ ತಡೆ

ಮಂಗಳೂರು: ಕೂಳೂರು ಜೋಕಟ್ಟೆ ಎಸ್ ಇಝಡ್ ಸಂಪರ್ಕದ ಎಂಆರ್ ಪಿಎಲ್ ಕಂಪೆನಿಯ ಸುಪರ್ದಿಯಲ್ಲಿರುವ ಕಾರಿಡಾರ್ ರಸ್ತೆಯ ಗುಂಡಿ ಮುಚ್ಚಲು ಹಾಗೂ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರುಚಿ ಗೋಲ್ಡ್ ಕಂಪೆನಿ ಮುಂಭಾಗ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ಉದ್ಯೋಗ ಸೃಷ್ಟಿಯ ಭರವಸೆ  ನೀಡಿ ತುಳುನಾಡಿನ ಅಪಾರ ಜಮೀನು ಕಬಳಿಸಿರುವ ಬೃಹತ್ ಕೈಗಾರಿಕೆಗಳು ಪರಿಸರವನ್ನು ಎಗ್ಗಿಲ್ಲದೆ ನಾಶಪಡಿಸಿದೆ. ನೆಲ ಜಲವನ್ನು ವಿಷಮಯಗೊಳಿಸಿದ್ದು ಸಾಲದು ಎಂಬಂತೆ ಕಂಪೆನಿಯ ಸುತ್ತಲ ರಸ್ತೆ, ಚರಂಡಿಗಳನ್ನು ಬಳಕೆಗೆ ಆಯೋಗ್ಯ ಮಾಡಿ ಬಿಟ್ಟಿವೆ. ಕೈಗಾರಿಕೆಗಳ ಇಂತಹ ಸ್ಥಳೀಯರ ವಿರೋಧಿ ನೀತಿಗಳಿಗೆ ಎಂಆರ್ ಪಿಎಲ್ ನಾಯಕತ್ವ ನೀಡುತ್ತಿದೆ. ಕಂಪೆನಿ ತನ್ನ ತಪ್ಪುಗಳನ್ನು ಸರಿಪಡಿಸದಿದ್ದಲ್ಲಿ ಎಂಆರ್ ಪಿಎಲ್ ಅನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಕೂಳೂರು, ಎಸ್ ಇಝಡ್ ರಸ್ತೆ ಈಗ ಎಂಆರ್ ಪಿಎಲ್ ಅಧೀನದಲ್ಲಿ ಇದೆ. ಎಸ್ ಇಝಡ್, ಅನಘ, ರುಚಿಗೋಲ್ಡ್, ಅದಾನಿ ವಿಲ್ಮಾ ಸಹಿತ ಹಲವು ಕೈಗಾರಿಕೆಗಳು ಈ ರಸ್ತೆಯನ್ನು ಬಳಸುತ್ತಿವೆ. ಆದರೆ ರಸ್ತೆ ಪೂರ್ತಿ ಹೊಂಡಮಯ ಆಗಿದ್ದರೂ ಕಂಪೆನಿಗಳಾಗಲಿ, ಜಿಲ್ಲಾಡಳಿತವಾಗಲಿ ಅವುಗಳನ್ನು ಸರಿಪಡಿಸಲು ಯಾವುದೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇಲ್ಲಿಯ ಚರಂಡಿಗಳನ್ನು ಕಂಪೆನಿಗಳು ಅಕ್ರಮಿಸಿ ಮಣ್ಣು ತುಂಬಿಸಿದ್ದರೂ ಕೇಳುವವರಿಲ್ಲ. ಅದರಿಂದ ಕಂಪೆನಿಗಳ ಮಲಿನ ನೀರು ಆಳೆತ್ತರಕ್ಕೆ ನಿಂತು ರೋಗರೋಜಿನಗಳು ವ್ಯಾಪಕವಾಗಿ ಹರಡುತ್ತಿವೆ. ಸಣ್ಣ ವಾಹನಗಳಲ್ಲಿ ಪ್ರಯಾಣಿಸುವ ಜನತೆ ರಸ್ತೆ ಹೊಂಡಕ್ಕೆ ಬಿದ್ದು ಕೈಕಾಲು ಮುರಿಸಿಕೊಳ್ಳುತ್ತಿದ್ದಾರೆ. ಹೊಂಡ ಗುಂಡಿ ಮುಚ್ಚಲು ಜಿಲ್ಲಾಡಳಿತ ತಕ್ಷಣ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಸ್ಥಳೀಯ ಕಂಪೆನಿಗಳಿಗೆ ಘೆರಾವ್ ಮಾಡುವುದಾಗಿ ಎಚ್ಚರಿಸಿದರು.

ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಝ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಸ್ ಬಶೀರ್, ತೋಕೂರು  ಗ್ರಾಮ ಪಂಚಾಯತ್ ಅಧ್ಯಕ್ಷ ಕೆವಿನ್, ಹೋರಾಟ ಸಮಿತಿಯ ಸಂಚಾಲಕ, ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ, ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರೆಸಿಲ್ಲಾ ಮೊಂತೆರೊ, ಮಾಜಿ ಉಪಾಧ್ಯಕ್ಷ ಸಂಸು ಇದ್ದಿನಬ್ಬ, ಹೋರಾಟ ಸಮಿತಿಯ ಪ್ರಮುಖರಾದ ಹನೀಫ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ಫಾರೂಕ್ ಕೆಬಿಎಸ್, ಇಕ್ಬಾಲ್ ಜೋಕಟ್ಟೆ, ಹಮೀದ್, ಶಂಸುದ್ದಿನ್ ಅರಿಕೆರೆ, ಇಸ್ಮಾಯಿಲ್ ಅಜಾದ್ ಮತ್ತಿತರರು ನಾಯಕತ್ವ ವಹಿಸಿದ್ದರು.

Join Whatsapp
Exit mobile version