Home ಟಾಪ್ ಸುದ್ದಿಗಳು ರಸ್ತೆ ಅಪಘಾತ ಹಿನ್ನೆಲೆ; ಪೊಲೀಸ್ ಸಿಬ್ಬಂದಿಯ‌‌ ತಡರಾತ್ರಿ ಪ್ರಯಾಣಕ್ಕೆ ನಿರ್ಬಂಧ

ರಸ್ತೆ ಅಪಘಾತ ಹಿನ್ನೆಲೆ; ಪೊಲೀಸ್ ಸಿಬ್ಬಂದಿಯ‌‌ ತಡರಾತ್ರಿ ಪ್ರಯಾಣಕ್ಕೆ ನಿರ್ಬಂಧ

ಬೆಂಗಳೂರು: ಗಾಂಜಾ ಆರೋಪಿ ಬಂಧನಕ್ಕೆ ಹೋಗಿದ್ದಾಗ ಆಂಧ್ರಪ್ರದೇಶದ ಚಿತ್ತೂರು ಬಳಿ ಕಾರು ಅಪಘಾತ ಸಂಭವಿಸಿ ಸಬ್ ಇನ್ಸ್ ಪೆಕ್ಟರ್, ಕಾನ್​ ಸ್ಟೇಬಲ್ ಸೇರಿ ಮೂವರು ದಾರುಣ ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು ಸಿಬ್ಬಂದಿಗಳ ರಾತ್ರಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಸಿಐಡಿ ಕಚೇರಿಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾತ್ರ ಅನ್ವಯಿಸುವಂತೆ ಸಿಐಡಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಬಂದೋ ಬಸ್ತ್, ಚುನಾವಣಾ ಕರ್ತವ್ಯ, ಅಪರಾಧ ಪ್ರಕರಣಗಳ ತನಿಖಾ ಸಂಬಂಧ ಹಾಗೂ ಇನ್ನಿತರ ಅನ್ಯ ಕಾರ್ಯದ ಮೇಲೆ ನಿಯೋಜನೆಗೊಳ್ಳುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ವಾಹನದಲ್ಲಿ ಕರ್ತವ್ಯ  ನಿಮಿತ್ತ ಅಥವಾ ಕರ್ತವ್ಯದಿಂದ ಬಿಡುಗಡೆಯಾದ ನಂತರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರಯಾಣ ಮಾಡದಂತೆ ಆದೇಶಿಸಲಾಗಿದೆ.

ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿಯಲ್ಲದೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು, ಸಿಎಆರ್, ಡಿಎಆರ್, ಕೆಎಸ್ ಆರ್ ಪಿ ಹಾಗೂ ಇತರೆ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಯೂ ರಾತ್ರಿ ಪ್ರಯಾಣದ ವೇಳೆ ಅಪಘಾತಗಳಾಗಿ ಮೃತಪಟ್ಟಿರುವ ಉದಾಹರಣೆಗಳಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ವರದಿ ಪ್ರಕಾರ ದೇಶದಲ್ಲಿ 2021ರಲ್ಲಿ ವಿವಿಧ ದರ್ಜೆಯ 427 ಅಧಿಕಾರಿ, ಸಿಬ್ಬಂದಿ ಮೃತಪಟ್ಟಿದ್ದು, ಇದರಲ್ಲಿ 339 ಮಂದಿ ರಸ್ತೆ ಅಪಘಾತಗಳಲ್ಲೇ ಕೊನೆಯುಸಿರೆಳೆದಿದ್ದಾರೆ. ಕರ್ತವ್ಯದ ವೇಳೆ ದೇಶದಲ್ಲಿ  ಒಟ್ಟು 1,632 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತಗಳಲ್ಲಿ 372 ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಕರ್ನಾಟಕದಲ್ಲೇ ನಾಲ್ವರು ಮೃತಪಟ್ಟು 25 ಮಂದಿ ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ.

ಈವರೆಗಿನ ವರದಿಗಳ ಪ್ರಕಾರ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸಿರುವುದು ರಾತ್ರಿ ಸಮಯದಲ್ಲೇ ಆಗಿದ್ದು, ನಿದ್ದೆ ಮಂಪರಲ್ಲೇ ಬಹುತೇಕ ಅಪಘಾತಗಳಾಗಿವೆ.

ಚಾಲಕನಿಗೆ ನಿದ್ದೆ ಆವರಿಸುವ ಸಾಧ್ಯತೆ ಜಾಸ್ತಿಯಾಗಿರುವುದರಿಂದ ಹೆದ್ದಾರಿಗಳಲ್ಲಿ ವಾಹನ ಚಾಲನೆ ಅಷ್ಟು ಸುಲಭವೂ ಅಲ್ಲ. ಹೆಚ್ಚು ಗಮನಹರಿಸಬೇಕಾದ ಹಾಗೂ  ಒತ್ತಡದ ಕೆಲಸವಾದ್ದರಿಂದ ಅಗತ್ಯ ಸಂದರ್ಭಗಳಲ್ಲಿ ಹೊರತುಪಡಿಸಿ ರಾತ್ರಿ ವೇಳೆ ವಾಹನ ಚಾಲನೆ ಯಾರಿಗೂ ಒಳ್ಳೆಯದಲ್ಲ. ಹೀಗಾಗಿ ಪೊಲೀಸರ ಹಿತದೃಷ್ಟಿಯಿಂದ ರಾತ್ರಿ ಪ್ರಯಾಣ ನಿರ್ಬಂಧಿಸುವ ಆದೇಶ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

.

Join Whatsapp
Exit mobile version