ಸುಪ್ರೀಂ ‘ದಂಡ’ಕ್ಕೆ ಅರ್ಜಿ ಹಿಂಪಡೆದ ರಿಝ್ವಿ | ಕುರ್ ಆನಿನ 26 ಸೂಕ್ತಗಳನ್ನು ಕೈ ಬಿಡುವಂತೆ ಸಲ್ಲಿಕೆಯಾಗಿದ್ದ ಪ್ರಕರಣ ರದ್ದು

Prasthutha|

ದೆಹಲಿ: ಪವಿತ್ರ ಗ್ರಂಥ ಕುರ್ ಆನ್ ನಲ್ಲಿರುವ ಕೆಲವೊಂದು ಸೂಕ್ತಗಳನ್ನ ತೆಗೆದುಹಾಕುವಂತೆ ಸಲ್ಲಿಕೆಯಾಗಿದ್ದ ಪ್ರಕರಣವನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕುರ್ ಆನ್ ನ 26 ಸೂಕ್ತಗಳನ್ನ ತೆಗೆದುಹಾಕುವಂತೆ ಅರ್ಜಿ ಸಲ್ಲಿಸಿದ್ದ ಶಿಯಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ವಸೀಂ ರಿಝ್ವಿ ಅರ್ಜಿಯನ್ನ ಹಿಂಪಡೆದ್ದರಿಂದ ಸರ್ವೋಚ್ಛ ನ್ಯಾಯಾಲಯವು ಪ್ರಕರಣವನ್ನ ವಜಾಗೊಳಿಸಿತು.

- Advertisement -

ಪ್ರಕರಣವನ್ನ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿಂದೆ ಅರ್ಜಿ ವಜಾಗೊಳಿಸಿ ವಿಧಿಸಲಾಗಿದ್ದ 50 ಸಾವಿರ ರೂ. ದಂಡವನ್ನ ಮನ್ನಾ ಮಾಡುವಂತೆ ವಕೀಲರು ಪೀಠಕ್ಕೆ ಮನವಿ ಮಾಡಿಕೊಂಡರು. ಅಲ್ಲದೇ, ಪ್ರಕರಣದ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಹಾಕಿದ್ದಾಗಿ ನ್ಯಾಯಾಲಯದ ಮುಂದೆ ರಿಝ್ವಿ ಪರ ವಕೀಲರು ತಿಳಿಸಿದರು.

ಇದೇ ವೇಳೆ ಜಸ್ಟಿಸ್ ನಾರಿಮನ್, ನ್ಯಾಯಾಲಯವು ವಿಧಿಸಿದ 50 ಸಾವಿರ ರೂ. ದಂಡವನ್ನ ಯಾವಾಗ ಪಾವತಿಸುವುದಾಗಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಪ್ರಕರಣದಿಂದ ಹಿಂದೆ ಸರಿದಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅರ್ಜಿದಾರರು ಉತ್ತರಿಸುವ ಸ್ಥಿತಿಯಲ್ಲಿಲ್ಲ ಎಂದರು. ಅದಾಗ್ಯೂ ವಕೀಲರು ಅರ್ಜಿಯನ್ನ ಹಿಂಪಡೆಯವುದಕ್ಕಾಗಿ ಅನುಮತಿ ಕೇಳಿದರು.

- Advertisement -

ಇದರ ಬೆನ್ನಲ್ಲೇ ನ್ಯಾಯಮೂರ್ತಿಗಳಾದ ಜಸ್ಟಿಸ್ ಆರ್.ಎಫ್. ನಾರಿಮನ್, ಕೆಎಂ ಜೋಸೆಫ್ ಹಾಗೂ ಬಿಆರ್ ಗವಾಯಿ ಅವರಿದ್ದ ತ್ರಿಸದಸ್ಯ ಪೀಠವು ಅರ್ಜಿಯನ್ನು ಹಿಂಪಡೆಯಲಾಗಿ ಪ್ರಕರಣ ವಜಾಗೊಳಿಸಲಾಗಿದೆ ಎಂದು ತಿಳಿಸಿತು.

ಕಳೆದ ಮಾರ್ಚ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದ ವಸೀಂ ರಿಜ್ವಿ ಕುರ್ ಆನ್ ನಲ್ಲಿರುವ 26 ಸೂಕ್ತಗಳನ್ನ ಕೈ ಬಿಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು. ಭಯೋತ್ಪಾದನೆ ಕೃತ್ಯ ಎಸಗುವವರ ಸಮರ್ಥನೆಗೆ ಈ ಸೂಕ್ತಗಳು ಕಾರಣವಾಗುತ್ತಿದ್ದು, ಇದನ್ನ ಕಲಿಯುವುದರಿಂದ ಮಕ್ಕಳ ಭವಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಾಗಿ ಅರ್ಜಿದಾರರು ತಿಳಿಸಿದ್ದರು.

ಈ ಪ್ರಕರಣವನ್ನ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಎಪ್ರಿಲ್ 12 ರಂದು ಜಸ್ಟಿಸ್ ಆರ್.ಎಫ್. ನಾರಿಮನ್ ನೇತೃತ್ವದ ನ್ಯಾಯಪೀಠವು “ಇದೊಂದು ಅಪ್ಪಟ ಕ್ಷುಲ್ಲಕ ಅರ್ಜಿ” ಎಂದು ವಜಾಗೊಳಿಸಿ, ನ್ಯಾಯಾಲಯದ ವೆಚ್ಚ ಭರಿಸುವಂತೆ ತಿಳಿಸಿ ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಅಲ್ಲದೇ, ದಂಡದ ಮೊತ್ತವನ್ನ ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಮಾಹಿತಿಗೆ ಸಲ್ಲಿಸುವಂತೆ ತಿಳಿಸಿತ್ತು.  



Join Whatsapp