ನವದೆಹಲಿ: ಡೈಮಂಡ್ ಲೀಗ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದ ಭಾರತದ ಹೆಮ್ಮೆಯ ಜಾವೆಲಿನ್ ಪಟು ನೀರಜ್ ಚೋಪ್ರಾ, 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರವರೆಗೆ ಗುಜರಾತ್‌ನ ಆರು ನಗರಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ.
“ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದೇನೆ. ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಂಡ ಬಳಿಕ ವಿಶ್ರಾಂತಿ ಪಡೆಯಲು ಬಯಸಿದ್ದೆ. ಆದರೆ ಕೆಲ ದಿನಗಳಲ್ಲೇ ರಾಷ್ಟ್ರೀಯ ಕ್ರೀಡಾಕೂಟ ಆರಂಭವಾಗಲಿದೆ. ನನ್ನ ಕೋಚ್ ಬಳಿ ಈ ಕುರಿತು ಚರ್ಚಿಸಿದ್ದೇನೆ, ಆದರೆ ವಿಶ್ರಾಂತಿಯ ಅಗತ್ಯವಿರುವುದಾಗಿ ಹೇಳಿದ್ದಾರೆ. ಹೀಗಾಗಿ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ” ಎಂದು ಚೋಪ್ರಾ ಹೇಳಿದ್ದಾರೆ.
ಆ ಮೂಲಕ 7 ವರ್ಷಗಳ ಬಳಿಕ ನಡೆಯುತ್ತಿರುವ ರಾಷ್ಟ್ರೀಯ ಗೇಮ್ಸ್‌ಗೆ ನೀರಜ್ ಚೋಪ್ರಾ ಗೈರಾಗುವುದು ಬಹುತೇಕ ಖಚಿತವಾಗಿದೆ.
ದೇಶದ ಖ್ಯಾತನಾಮ ಕ್ರೀಡಾಪಟುಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಇತ್ತೀಚೆಗೆ ಹೇಳಿತ್ತು. ಅದಾಗಿಯೂ ನೀರಜ್ ಚೊಪ್ರಾ ಜೊತೆಗೆ ಪ್ರಮುಖ ಷಟ್ಲರ್‌ಗಳಾದ ಪಿ ವಿ ಸಿಂಧು, ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಕೂಡ ಗೇಮ್ಸ್‌ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್‌ನಲ್ಲಿ ನಡೆಯಲಿರುವ ಡೆನ್ಮಾರ್ಕ್ ಓಪನ್ ಮತ್ತು ಫ್ರೆಂಚ್ ಓಪನ್ ಟೂರ್ನಿಗಾಗಿ ಸಿಂಧು ಮತ್ತು ಶ್ರೀಕಾಂತ್ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ವಿಶ್ವ ಶ್ರೇಯಾಂಕದಲ್ಲಿ ಭಡ್ತಿ ಪಡೆಯಲು ಇಬ್ಬರಿಗೂ ಈ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ.