ನವದೆಹಲಿ: ಕಳೆದ ಈಶಾನ್ಯ ದೆಹಲಿ ಗಲಭೆಯಲ್ಲಿ ಗಾಯಗೊಂಡ ಐವರು ಸಂತ್ರಸ್ತರನ್ನು ರಾಷ್ಟ್ರಗೀತೆ ಹಾಡಲು ಬಲವಂತಪಡಿಸಿದ ಮೂವರು ಪೊಲೀಸರ ಕುಕೃತ್ಯವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಗಾಯಗೊಂಡು ನೆಲದಲ್ಲಿ ಬಿದ್ದಿದ್ದ ಗಾಯಾಳುಗಳಿಗೆ ಹಲ್ಲೆ ನಡೆಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದ್ದು, ಗಾಯಗೊಂಡವರಲ್ಲಿ ಒಬ್ಬರು ನಂತರ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೂವರು ಪೊಲೀಸರನ್ನು ಸುಳ್ಳುಪತ್ತೆ ಪರೀಕ್ಷೆಗೊಳಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿ ಫೂಟ ರಸ್ತೆಯಲ್ಲಿ ಫೆಬ್ರವರಿ 25 ರಂದು ನಡೆದ ಗಲಭೆ ಹಿನ್ನೆಲೆಯಲ್ಲಿ ಗಾಯಗೊಂಡ ಸಂತ್ರಸ್ತರನ್ನು ಜನ ಗಣ ಮನ ಮತ್ತು ವಂದೇ ಮಾತರಂ ಹಾಡಲು ಬಲವಂತಪಡಿಸುತ್ತಿರುವ ಪೊಲೀಸರ ದುಷ್ಕೃತ್ಯ ವೀಡಿಯೋ ದೃಶ್ಯಾವಳಿ ಮೂಲಕ ಬಹಿರಂಗವಾಗಿತ್ತು.
ಕಾರ್ಡಮ್ ಪುರಿ ನಿವಾಸಿ ಫೈಜಾನ್ ಎಂಬ ವ್ಯಕ್ತಿಯು ಪೊಲೀಸರ ದುಷ್ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದ. ಪೊಲೀಸರು ನಂತರ ಆತನನ್ನು ಬಂಧಿಸಿ ಬಿಡುಗಡೆಗೊಳಿಸಿದ ಒಂದು ದಿನದ ನಂತರ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಕುರಿತು ಕುಟುಂಬದ ಮೂಲಗಳು ಮಾಧ್ಯಮಕ್ಕೆ ಮಾಹಿತಿ ನೀಡಿವೆ.
ದೆಹಲಿ ಗಲಭೆ ನಿಯಂತ್ರಿಸುವ ಸಲುವಾಗಿ ಭದ್ರತೆಗೆ ನಿಯೋಜಿಸಿದ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಈ ಮೂವರು ಪೊಲೀಸರ ದುಷ್ಕೃತ್ಯವು ದೆಹಲಿ ಗಲಭೆಯ ಸಂತ್ರಸ್ತರೋರ್ವರು ಮಾಡಿದ ವೀಡಿಯೋದದಿಂದ ಬಹಿರಂಗವಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 100 ಕ್ಕೂ ಮಿಕ್ಕಿದ ಪೊಲೀಸರನ್ನು ತನಿಖೆಗೊಳಪಡಿಸಲಾಗಿದೆ.
ಮಾತ್ರವಲ್ಲದೆ ಈ ಮೂವರು ಪೊಲೀಸರು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆ ಮೂವರು ಪೊಲೀಸರ ಅನುಮತಿ ಮೇರೆಗೆ ಸುಳ್ಳುಪತ್ತೆ ಪರೀಕ್ಷೆಯನ್ನು ನಡೆಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.