Home ಟಾಪ್ ಸುದ್ದಿಗಳು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ‌.ಎಲ್.ಮಂಜುನಾಥ್ ನಿಧನ

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ‌.ಎಲ್.ಮಂಜುನಾಥ್ ನಿಧನ

ಬೆಂಗಳೂರು: ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಶನಿವಾರ ಮಧ್ಯರಾತ್ರಿ ನಿಧನರಾದರು.

ಅವರಿಗೆ 68 ವರ್ಷ ವಯಸ್ಸಾಗಿತ್ತು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಮೀಪದಲ್ಲಿನ ಅವರ ಸ್ವಗೃಹದಲ್ಲಿ ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಂಜುನಾಥ್ ಅವರು 2000 ಡಿಸೆಂಬರ್ 11ರಂದು ಹೈಕೋರ್ಟ್ ನ್ಯಾಯಮೂರ್ತಿ ಯಾಗಿ ನೇಮಕಗೊಂಡಿದ್ದರು. 2015ರ ಏಪ್ರಿಲ್ 20ರಂದು ಹಿರಿಯ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ್ದರು.

ಭಾನುವಾರ (ಜ.23) ಮಧ್ಯಾಹ್ನ 3 ಗಂಟೆಗೆ ಕುಣಿಗಲ್ ರಸ್ತೆಯ ಕೆಂಪಲಿಂಗನಹಳ್ಳಿಯ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಂಟುಂಬ ಮೂಲಗಳು ತಿಳಿಸಿದೆ.

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

ಬೆಂಗಳೂರು:ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ನದಿ ನೀರು ಮತ್ತು ಗಡಿ ರಕ್ಷಣೆ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾನೂನಿನ ಚೌಕಟ್ಟಿನ ಒಳಗೇ ಮಾನವೀಯ ಮೌಲ್ಯ ಹಾಗೂ ಜನಪರ ಕಾಳಜಿ ಮೆರೆದಿದ್ದ ಮಂಜುನಾಥ್ ಅವರು ನ್ಯಾಯಾಂಗ ವ್ಯವಸ್ಥೆಯ ಘನತೆ, ಗೌರವಗಳನ್ನು ಎತ್ತಿ ಹಿಡಿದಿದ್ದರು.  ಅವರ ನಿಧನ ಬಹಳ ನೋವು ತಂದಿದೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೈತ್ರಿ ಸರಕಾರದ ಅವಧಿಯಲ್ಲಿ ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ರಚಿಸಿದ  ಕರ್ನಾಟಕ ರಾಜ್ಯ ನದಿ ನೀರು ಮತ್ತು ಗಡಿ ರಕ್ಷಣೆ ಆಯೋಗಕ್ಕೆ ನ್ಯಾ. ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಆಯೋಗವು ಸರಕಾರಕ್ಕೆ ಅನೇಕ ಉಪಯುಕ್ತ ಸಲಹೆ ಮತ್ತು ಶಿಫಾರಸ್ಸುಗಳನ್ನು ನೀಡಿದೆ ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.

ಮೂಲತಃ ಚನ್ನರಾಯಪಟ್ಟಣದ ಕಾಂತರಾಜಪುರದವರಾದ ನ್ಯಾ. ಮಂಜುನಾಥ್ ಅವರು ವಕೀಲಿ ವೃತ್ತಿ ಅವಧಿಯಲ್ಲಿ ಬಡವರಿಗೆ, ದೀನ, ದಲಿತರಿಗೆ ಉಚಿತ ಕಾನೂನು ಸೇವೆ ಒದಗಿಸಿದ್ದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿಯೂ ಕಾನೂನು ಹೋರಾಟ ನಡೆಸಿದ್ದರು. ಅವರು ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಹಲವು ಅತ್ಯಮೂಲ್ಯ ತೀರ್ಪುಗಳನ್ನು ನೀಡಿದ್ದರು ಎಂದು ಶಿವಕುಮಾರ್ ಅವರು ಶ್ಲಾಘಿಸಿದ್ದಾರೆ.

ನ್ಯಾ. ಮಂಜುನಾಥ್ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು, ಅಭಿಮಾನಿಗಳಿಗೆ ನೀಡುವಂತೆ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Join Whatsapp
Exit mobile version