ಹಾಸನ: ಹಾಸನ–ಮೈಸೂರು ಹೆದ್ದಾರಿ ಮೇಲ್ಸೇತುವೆಯ ತಡೆಗೋಡೆ ಕುಸಿದ ಘಟನೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಬಳಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ತಡೆಗೋಡೆ ಕುಸಿದಿದಿದ್ದು, ಮಣ್ಣು ಹೊರಗೆ ಬರಲಾರಂಭಿಸಿದೆ. ಇದರಿಂದಾಗಿ ಮೇಲ್ಭಾಗದ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸಿದರೆ, ಅಪಾಯ ಉಂಟಾಗುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ-373 ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹಂಗರಹಳ್ಳಿ ಬಳಿ ನಿರ್ಮಿಸಲಾಗಿತ್ತು. ಫ್ಲೈಓವರ್ ನಿರ್ಮಾಣ ಹಂತದಲ್ಲಿರುವಾಗಲೇ ಎರಡು ಬಾರಿ ಕುಸಿದಿದ್ದರೂ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ. ಇದೀಗ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3ನೇ ಬಾರಿಗೆ ಫ್ಲೈಓವರ್ ಸ್ಲ್ಯಾಬ್ ಗಳು ಹಾಗೂ ತಳಪಾಯದ ಮಣ್ಣು ಕುಸಿದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸಂಪೂರ್ಣ ಫ್ಲೈಓವರ್ ಕುಸಿಯುವ ಆತಂಕ ಎದುರಾಗಿದೆ.
ಅಪಾಯ ಉಂಟಾಗುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.