ಬೆಂಗಳೂರು: ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣಾ ಕಾರ್ಯ ಮುಕ್ತಾಯಗೊಳ್ಳುವವರೆಗೆ ಚುನಾವಣಾಧಿಕಾರಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವಿಡಿಯೋ ಸಂವಾದಗಳನ್ನು ನಡೆಸಬಾರದೆಂದು ಮುಖ್ಯ ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಜೂ.4 ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಈ ಮತ ಎಣೆಕೆ ಕಾರ್ಯದ ಪೂರ್ವ ಸಿದ್ಧತಾ ಕಾರ್ಯಗಳು ಹಾಗೂ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಗಳು ಪ್ರಗತಿಯಲ್ಲಿವೆ. ಈ ಸಂಬಂಧ ಮಾದರಿ ನೀತಿ ಸಂಹಿತೆ ಜೂ.6ರ ವರೆಗೆ ಜಾರಿಯಲ್ಲಿದೆ. ಈ ಹಂತದಲ್ಲಿ ಕೆಲವು ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರುಗಳು ವಿವಿಧ ವಿಷಯಗಳಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವಿಡಿಯೋ ಸಂವಾದ ಏರ್ಪಡಿಸುತ್ತಿದ್ದಾರೆ. ಇದರಿಂದಾಗಿ ಲೋಕ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ನಿರ್ವಹಿಸಲು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣಾ ಕಾರ್ಯಗಳಗೆ ಅಡಚಣೆಯುಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸುದೀರ್ಘ ಅವಧಿಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯ ಸರ್ಕಾದ ದಿನ ನಿತ್ಯದ ಕಾರ್ಯಗಳಿಗೂ ನೀತಿ ಸಂಹಿತೆಯ ಅಡಚಣಿ ಉಂಟಾಗಿದೆ.ತುರ್ತು ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯಿಂದ ವಿನಾಯಿತಿ ಕೋರಿ ಸರ್ಕಾದ ವಿವಿಧ ಸಚಿವರು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಕೆಲವು ದೈನಂದಿನ ಸಭೆಗಳನ್ನು ಮಾಡಲು ಚುನಾವಣಾ ಆಯೋಗ ವಿನಾಯಿತಿ ನೀಡಿತ್ತು. ಆದರೆ ಈಗ ಉನ್ನತಾಧಿಕಾರಿಗಳ ವೀಡಿಯೋ ಸಂವಾದ, ಸಭೆಗಳಿಗೂ ಕಡಿವಾಣ ಹಾಕಿದೆ.