Home ಟಾಪ್ ಸುದ್ದಿಗಳು ರೈತ, ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಪಣತೊಡಿ: ತಾಹೀರ್ ಹುಸೇನ್

ರೈತ, ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಪಣತೊಡಿ: ತಾಹೀರ್ ಹುಸೇನ್

ಬೆಂಗಳೂರು: ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆದರೂ ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ರಾಷ್ಟ್ರೀಯ ಜನಾಂದೋಲನಾ ನಡೆಸಲಾಯಿತು.

ಪ್ರತಿಭಟನಾನಿರತ ಕಾರ್ಯಕರ್ತರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ನೋ ಜಾಬ್ ನೋ ಮನಿ, ಉದ್ಯೋಗ ಕೊಡಿ, ಮನ್ ಕಿ ಬಾತ್ ನಹಿ ಕಾಮ್ ಕಿ ಬಾತ್ ಕರೋ ಎಂಬ ಭಿತ್ತಿ ಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಮಾತನಾಡಿ, ರಾಜ್ಯ ಸೇರಿ ದೇಶಾದ್ಯಂತ ನಿರುದ್ಯೋಗ,  ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆಯಿಂದ ಅನೇಕ ಯುವಕರು ಆತ್ಮಹತ್ಯೆಗೆ ಗುರಿಯಾಗಿದ್ದಾರೆ ಎಂದು ಆರೋಪಿಸಿದರು.

ನಿರುದ್ಯೋಗ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಜನರಿಗೆ ಜಾಗೃತಿ ಮೂಡಿಸಲು ವೆಲ್ ಫೇರ್ ಪಾರ್ಟಿಯಿಂದ ಕಲಬುರಗಿಯಿಂದ ಮಂಗಳೂರಿನವರೆಗೆ ಜಾಗೃತಿ ಜಾಥಾ ನಡೆಸಿದ್ದೇವೆ. ಈ ಜಾಥಾದಲ್ಲಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಿದ್ದು, ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ರಾಜ್ಯದಲ್ಲಿ ರೈತರ, ಮಹಿಳೆಯರ, ಕಾರ್ಮಿಕರ, ಯುವಕರ ಸ್ಥಿತಿ ಶೋಚನೀಯವಾಗಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಪೊರೇಟ್ ಪರ ಆಡಳಿತ ನಡೆಸುತ್ತಿದೆ. ಇದರಿಂದ ಹೊರಗೆ ಬಂದು ರೈತರ, ಬಡವರ, ಮಹಿಳೆಯರ, ಯುವಕರ ಪರವಾಗಿ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಜನರು ಜಾಗೃತರಾಗಬೇಕು. ಮುಂಬರುವ ಚುನಾವಣೆಯಲ್ಲಿ ಜನಪರ ಆಡಳಿತ ನಡೆಸುವವರಿಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲ ಖಾನ್  ಮಾತನಾಡಿ, ದೇಶದಲ್ಲಿ ಅನೇಕ ಸಮಸ್ಯೆಗಳಿಂದ ಜನಸಾಮಾನ್ಯರು ಜರ್ಜರಿತರಾಗಿದ್ದಾರೆ. ಇದೆಲ್ಲದರ ಜೊತೆಗೆ ಮುಖ್ಯವಾಗಿ ನಿರುದ್ಯೋಗ ಹಾಗೂ ಬೆಲೆ ಏರಿಕೆ ಹೆಚ್ಚು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಇದರ ಬಗ್ಗೆ ದೇಶಾದ್ಯಂತ ವೆಲ್ ಫೇರ್ ಪಾರ್ಟಿಯಿಂದ ಬೀದಿ ನಾಟಕ, ಮನೆ ಮನೆ ಸಮೀಕ್ಷೆ, ಬಸ್ ಮೂಲಕ ಜನ ಜಾಗೃತಿ ಜಾಥಾ ಹೀಗೆ  ವಿವಿಧ ರೀತಿಯಲ್ಲಿ ಸರ್ಕಾರದ ನಿಲುವು ಖಂಡಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ರಾಜ್ಯದಲ್ಲಿ ಅಕ್ಟೋಬರ್ 15ರಿಂದ 21ರ ವರೆಗೆ ಜಾಗೃತಿ ಜಾಥಾ ಮಾಡಿದ್ದೇವೆ. ನಿರುದ್ಯೋಗಿ ಯುವಕರು, ಬಡವರು ಮಹಿಳೆಯರು ಜಾಥಾ ಗೆ ಬೆಂಬಲಿಸಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಇಂತಹ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಒಣ ತೊಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ತಲತ್ ಯಾಸ್ಮಿನ್, ಬೆಂಗಳೂರ್ ದಕ್ಷಿಣ ಅಧ್ಯಕ್ಷರಾದ ಸಫೀರ್ ಆಸಿಫ್, ಖಾಲಿದ್ ಖಾನ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

Join Whatsapp
Exit mobile version