ಸಕಲೇಶಪುರ: ಸರ್ಕಾರ ಕಾಡಾನೆ ಸಮಸ್ಯೆ ಬಗೆಹರಿಸದಿದ್ದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ನೆರೆ ಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು, ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಜನರು ಬಹಳ ಬೇಸರಗೊಂಡಿದ್ದಾರೆ. ಇನ್ನಾದರೂ ಸರ್ಕಾರ ಸ್ಪಂದಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಆಲೋಚನೆ ಮಾಡಿದ್ದೇನೆ ಎಂದರು.
ಕಾಡಾನೆ ಹಾವಳಿಯಿಂದ ಬೆಳೆಗಾರರಿಗೆ ಅಗುತ್ತಿರುವ ಸಮಸ್ಯೆ ಕುರಿತು ನನಗೂ ಬಹಳ ನೋವಿದೆ. ಕಾಫಿ ಬೆಳೆಗಾರರು, ಹೋರಾಟಗಾರರು, ಜನಸಾಮಾನ್ಯರು ಕೂಡ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಯಾರು ಕೂಡ ಇದರಲ್ಲಿ ರಾಜಕೀಯ ಮಾಡಬಾರದು. ನನಗೆ ಸದನದ ಒಳಗೆ, ಹೊರಗೆ ಹೋರಾಟ ಮಾಡುವುದು ಗೊತ್ತು. ಹೊರಗೆ ನಿಂತು ಮಾತನಾಡುವವರು ಹೋರಾಟ ಮಾಡಲಿ ನೋಡೋಣ ಎಂದು ಟೀಕಾಕಾರರಿಗೆ ಸವಾಲು ಹಾಕಿದರು.
ತಾಲೂಕಿನ ಪ್ರಮುಖ ನದಿಯಾದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಹಾಗೂ ತಾಲೂಕು ಆಡಳಿತ ಬಾಗಿನ ಸಮರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಈ ಬಾರಿ ಮುಂಗಾರು ಮಳೆ ಬೇಗ ಪ್ರಾರಂಭವಾಗಿದ್ದು ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಮಲೆನಾಡು ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಮನೆ, ಕೆರೆ-ಕಟ್ಟೆ, ಶಾಲೆ, ರಸ್ತೆಗಳು ಹಾನಿಗೊಳಗಾಗಿದೆ. ಪಶ್ಚಿಮ ಘಟ್ಟದ ಗ್ರಾಮಗಳಾದ ಬಿಸ್ಲೆ, ಮಾವಿನೂರು, ತಂಬಲಗೇರಿ, ಹೆತ್ತೂರು, ವಣಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆ ನಾಶವಾಗಿದೆ. ಮಳೆಗಾಲ ಇನ್ನು ಎರಡು ತಿಂಗಳು ಮುಂದುವರಿಯಲಿದ್ದು ಈಗಾಗಲೇ ಸಾಕಷ್ಟು ನಷ್ಟ ಸಂಭವಿಸಿದೆ. ಸರ್ಕಾರ ಮಳೆಯಿಂದ ಬಿದ್ದ ಮನೆಗಳಿಗೆ ಅಲ್ಪ ಪ್ರಮಾಣದ ಪರಿಹಾರ ನೀಡುವುದರ ಬದಲು ಸರಿಯಾದ ಸಮೀಕ್ಷೆ ನಡೆಸಿ ತಾಲೂಕಿಗೆ ತಕ್ಷಣವೇ 25 ಕೋಟಿ ರೂಪಾಯಿ ಬಿಡುಗಡೆಗೊಳಿಸಬೇಕು ಎಂದು ಅಗ್ರಹಿಸಿದರು.
ಮಳೆಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೇವಲ ಮನೆಗಳಿಗೆ ಪರಿಹಾರ ನೀಡಿದರೆ ಸಾಲದು ರಸ್ತೆ ದುರಸ್ತಿಗೆ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದರು.
ಮಲೆನಾಡು ಪ್ರದೇಶಗಳಾದ ಶೃಂಗೇರಿ, ಮೂಡಿಗೆರೆ, ಕೊಪ್ಪ, ಚಿಕ್ಕಮಗಳೂರು ಭಾಗದಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸುತ್ತದೆ ಆದ್ದರಿಂದ ಸರ್ಕಾರ ಪ್ರತಿ ವರ್ಷ ಕನಿಷ್ಠ 100 ಕೋಟಿ ರೂಪಾಯಿ ಹೆಚ್ಚುವರಿ ಅನುದಾನವನ್ನು ಮೀಸಲಿಡಬೇಕು ಎಂದರು.