Home ರಾಜ್ಯ ಬಿಡಿಎ, ಕೆ.ಎಚ್.ಬಿ, ಗ್ರಾಮೀಣ, ನಗರ ಪ್ರಾಧಿಕಾರಗಳಿಗೂ ಅನ್ವಯವಾಗುತ್ತೆ ರೇರಾ ಕಾಯ್ದೆ: ಸರ್ಕಾರಿ ನಿವೇಶನ, ವಸತಿ ಸಂಕಿರ್ಣಗಳ...

ಬಿಡಿಎ, ಕೆ.ಎಚ್.ಬಿ, ಗ್ರಾಮೀಣ, ನಗರ ಪ್ರಾಧಿಕಾರಗಳಿಗೂ ಅನ್ವಯವಾಗುತ್ತೆ ರೇರಾ ಕಾಯ್ದೆ: ಸರ್ಕಾರಿ ನಿವೇಶನ, ವಸತಿ ಸಂಕಿರ್ಣಗಳ ಬಗ್ಗೆ ಸಲ್ಲಿಕೆಯಾಗದ ದೂರು

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ – ರೇರಾ ವ್ಯಾಪ್ತಿಗೆ ಬಿಡಿಎ, ಕರ್ನಾಟಕ ಗೃಹ ಮಂಡಳಿ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳು ಸಹ ಬರುತ್ತವೆ. ಆದರೆ ಈವರೆಗೆ ಬಿಡಿಎ, ಕೆ.ಎಚ್.ಬಿ. ನಿರ್ಮಾಣ ಮಾಡಿರುವ ನಿವೇಶಗಳ ಕುರಿತು ಯಾವುದೇ ದೂರು ರೇರಾ ಗೆ ಸಲ್ಲಿಸಿಲ್ಲ. ಅಷ್ಟೇ ಅಲ್ಲ, ಗ್ರಾಮೀಣ ಭಾಗದ ಗ್ರಾಮಠಾಣಾ ನಿವೇಶಗಳು ಸಹ ರೇರಾ ವ್ಯಾಪ್ತಿಗೆ ಒಳಪಡುತ್ತವೆ. ನಗರ ಪ್ರದೇಶವಷ್ಟೇ ಅಲ್ಲದೇ ಗ್ರಾಮಠಾಣಾ ನಿವೇಶಗಳ ಬಗ್ಗೆಯೂ ಹೆಚ್ಚಾಗಿ ರೇರಾಗೆ ದೂರು ದಾಖಲಾಗುತ್ತಿಲ್ಲ. ಖಾಸಗಿ ಬಡಾವಣೆ, ವಸತಿ ಸಂಕಿರ್ಣಗಳ ಮೋಸ, ವಂಚನೆ ಕುರಿತು ಹೆಚ್ಚಿನ ದೂರು ಬರುತ್ತಿವೆ. ಸರ್ಕಾರದ ಸಂಸ್ಥೆಗಳು ನಿರ್ಮಿಸುವ ಬಡಾವಣೆಗಳು, ವಸತಿ ಸಂಕಿರ್ಣಗಳು ರೇರಾ ವ್ಯಾಪ್ತಿಗೆ ಒಳಪಡುವ ಕುರಿತು ಜನ ಸಾಮಾನ್ಯರಿಗೆ ಮಾಹಿತಿ ಇಲ್ಲ. ನೌಕರರ ಸಹಕಾರ ಸಂಘಗಳ ಬಗ್ಗೆಯೂ ಗ್ರಾಹಕರಿಂದ ಅಷ್ಟೇನು ಆಕ್ಷೇಪ ವ್ಯಕ್ತವಾಗಿಲ್ಲ.


ವಿಶೇಷ ಎಂದರೆ ಬಹುತೇಕ ಮಂದಿಗೆ ಬಿಡಿಎ, ಕೆ.ಎಚ್.ಬಿ, ಸರ್ಕಾರಿ ಪ್ರಾಧಿಕಾರಗಳು ರೇರಾ ವ್ಯಾಪ್ತಿಗೆ ಬರುತ್ತವೆ ಎನ್ನುವ ಮಾಹಿತಿಯನ್ನೇ ತಿಳಿದುಕೊಂಡಿಲ್ಲ. ರೇರಾ ಖಾಸಗಿ ಬಿಲ್ಡರ್ ಗಳ ಮೇಲೆ ಮಾತ್ರ ಅಂಕುಶ ಹಾಕುತ್ತದೆ ಎನ್ನುವ ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಆದರೆ ವಾಸ್ತವ ಇದಲ್ಲ. 500 ಚದರ ಮೀಟರ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ನಿವೇಶನ ಅಭಿವೃದ್ಧಿಪಡಿಸುವ, 8 ಕ್ಕಿಂತ ಹೆಚ್ಚು ವಸತಿಮನೆಗಳನ್ನು ನಿರ್ಮಿಸುವ ಯೋಜನೆಗಳು ಕಡ್ಡಾಯವಾಗಿ ರೇರಾದಡಿ ನೋಂದಣಿಯಾಗಲೇಬೇಕು. ಇಲ್ಲವಾದಲ್ಲಿ ಅಂತಹ ಡವಲಪರ್ ದಂಡನಾರ್ಹ ಶಿಕ್ಷೆಗೆ ಗುರಿಯಾಗುತ್ತಾನೆ.


ವಾಸ್ತವವಾಗಿ ಈ ವ್ಯವಸ್ಥೆ ಜಾರಿಯಾದ 2016 ನಂತರದ ಯೋಜನೆಗಳಿಗೆ ರೇರಾ ಅನ್ವಯಿಸುತ್ತದೆ. 2016 ಕ್ಕೂ ಮುನ್ನ ವಸತಿ ಯೋಜನೆ ಆರಂಭವಾಗಿ ಶೇ 60 ರಷ್ಟು ಪೂರ್ಣಗೊಂಡಿದ್ದರೆ ಅವು ರೇರಾ ವ್ಯಾಪ್ತಿಗೆ ಒಳಪಡುವುದಿಲ್ಲ. ಇದಕ್ಕೂ ಮುನ್ನ ಯೋಜನೆ ಪೂರ್ಣವಾಗಿದ್ದು, ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ವಹಿಸುವ ಕುರಿತು ಪತ್ರ ನೀಡಿದ್ದರೂ ಸಹ ಅದು ರೇರಾ ವ್ಯಾಪ್ತಿಗೆ ಒಳಪಡುವುದಿಲ್ಲ.
ವಿಶೇಷ ಎಂದರೆ ರೇರಾಗೆ ಖಾಸಗಿ ಮತ್ತು ಸರ್ಕಾರಿ ಎಂಬ ಭೇದಭಾವವಿಲ್ಲ. ಡವಲಪರ್ ಮತ್ತು ಖರೀದಿದಾರ ಎಂಬ ತಾರತಮ್ಯವಿಲ್ಲ. ತಪ್ಪು ಯಾವ ಕಡೆಯಿಂದ ಆದರೂ ಅದನ್ನು ಸರಿಪಡಿಸುವ ಕೆಲಸವನ್ನು ರೇರಾ ಮಾಡುತ್ತಿದೆ. ನಿವೇಶನ ನೀಡುವುದಾಗಿ ಒಪ್ಪಂದ ಮಾಡಿಕೊಂಡರೆ ಅದನ್ನು ಸಂಬಂಧಪಟ್ಟವರು ನಿಗದಿತ ಕಾಲ ಮಿತಿಯೊಳಗೆ ಪೂರೈಸಬೇಕು. ವಿಶೇಷ ಎಂದರೆ ಬಿಡಿಎ ಸಾಕಷ್ಟು ಮಂದಿ ಗ್ರಾಹಕರಿಗೆ ನಿವೇಶನ ಮಂಜೂರು ಮಾಡಿ ನಿವೇಶನಕ್ಕಾಗಿ ಪೂರ್ಣ ಪ್ರಮಾಣದ ಹಣ ಕಟ್ಟಿಸಿಕೊಳ್ಳುಿತ್ತದೆ. ಆದರೆ ವಾಸ್ತವವಾಗಿ ಮಂಜೂರಾದ ನಿವೇಶನವನ್ನು ಬೇರೆಯವರಿಗೆ ನೋಂದಣಿಮಾಡಿಕೊಡುತ್ತದೆ. ಇಂತಹ ಹತ್ತು ಹಲವು ಅಕ್ರಮಗಳು ಬಿಡಿಎದಲ್ಲಿ ನಿರಂತರವಾಗಿ ನಡೆಯುತ್ತವೆ.

ಕರ್ನಾಟಕ ಗೃಹ ಮಂಡಳಿ ಇಂತಹ ಅಕ್ರಮಗಳಿಂದ ಹೊರತಾಗಿಲ್ಲ. ಇದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳಲ್ಲೂ ನಿವೇಶನ ಖರೀದಿದಾರಿಗೆ ತೊಂದರೆಗಳು ಎದುರಾಗುತ್ತಿವೆ. ಆದರೆ ಈ ಬಗ್ಗೆ ಯಾವುದೇ ದೂರುಗಳು ಸಲ್ಲಿಕೆಯಾಗಿಲ್ಲ. ಈ ಕುರಿತು ಖರೀದಿದಾರರನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಇನ್ನು ರಿಯಲ್ ಎಸ್ಟೇಟ್ ಏಜೆಂಟ್ ಗಳು ಸಹ ರೇರಾ ವ್ಯಾಪ್ತಿಯಡಿ ನೋಂದಣಿಯಾಗುವುದು ಕಡ್ಡಾಯವಾಗಿದೆ. ನೋಂದಣಿಯಾಗದೇ ಮನೆ, ನಿವೇಶನ ಮಾರಾಟ ಮಾಡುವುದು ಸಹ ಅಪರಾಧ. ಈ ಕುರಿತಂತೆಯೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಡಿ ದಾಖಲಾಗುವ ದೂರುಗಳು 60 ದಿನಗಳಲ್ಲಿ ಇತ್ಯರ್ಥಗೊಳಿಸಬೇಕೆಂಬ ನಿಯಮವಿದೆ. ಹೀಗಾಗಿ ಇಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಹೆಚ್ಚಿನ ಒತ್ತಡವಿದೆ. ಹೀಗಾಗಿ ಪರ್ಯಾಯ ವ್ಯಾಜ್ಯ ಇತ್ಯರ್ಥ ಕ್ರಮಗಳನ್ನು ಸಹ ಇಲ್ಲಿ ಅಳವಡಿಸಲಾಗುತ್ತಿದೆ. ಇತ್ತೀಚೆಗೆ ನಡೆದ ಲೋಕ್ ಅದಾಲತ್ ನಲ್ಲಿ ಸುಮಾರು 180 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.

Join Whatsapp
Exit mobile version