Home ಟಾಪ್ ಸುದ್ದಿಗಳು ಗಣರಾಜ್ಯೋತ್ಸವ: ಪ್ರತಿ ಜಿಲ್ಲೆಗೆ 1 ಲಕ್ಷ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಗಣರಾಜ್ಯೋತ್ಸವ: ಪ್ರತಿ ಜಿಲ್ಲೆಗೆ 1 ಲಕ್ಷ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಜ.26ರ ಗಣರಾಜ್ಯೋತ್ಸವ ಆಚರಣೆಗೆ ಪ್ರತಿ ಜಿಲ್ಲೆಗೆ 1 ಲಕ್ಷ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಜಿಲ್ಲೆಗೆ ಮಾತ್ರ ಅರ್ಧ ಕೋಟಿ ರೂ. ಕೊಡಲಾಗಿದೆ.

ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭವನ್ನು ಬೆಂಗಳೂರು ನಗರದಲ್ಲಿ ದಿನಾಂಕ:26.01.2024ರಂದು ಏರ್ಪಡಿಸುವ ನಿಮಿತ್ತ ಬೆಂಗಳೂರು ನಗರ ಜಿಲ್ಲೆಗೆ ರೂ.50.00 ಲಕ್ಷಗಳನ್ನು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲಾಗಿದೆ.

30 ಜಿಲ್ಲೆಗಳಲ್ಲಿ, ಪ್ರತಿ ಜಿಲ್ಲೆಗೆ ರೂಪಾಯಿ ಒಂದು ಲಕ್ಷದಂತೆ ಒಟ್ಟು ರೂ.30,00,000 ಹಾಗೂ 31 ಜಿಲ್ಲೆಗಳಲ್ಲಿನ 232 ತಾಲ್ಲೂಕುಗಳಲ್ಲಿ, ಪ್ರತಿ ತಾಲ್ಲೂಕಿಗೆ ರೂ.20,000 ರಂತೆ ಒಟ್ಟು ರೂಪಾಯಿ ನಲವತ್ತಾರು ಲಕ್ಷ ನಲ್ವತ್ತು ಸಾವಿರಗಳು ಮೊತ್ತವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.

ಈ ಮೊತ್ತವನ್ನು 2024-25ನೇ ಸಾಲಿನ ಲೆಕ್ಕ ಶೀರ್ಷಿಕೆ:2070-00-115-1-01-051 ರಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸಲು‌ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಎ.ಸಿ.ಬಿಲ್ಲಿನಲ್ಲಿ ಹಣವನ್ನು ಪಡೆಯಲು ಅಧಿಕಾರವನ್ನು ಹೊಂದಿದ್ದು, ಹಣವನ್ನು ಪಡೆದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಮಹಾಲೇಖಪಾಲರಿಗೆ ಎನ್.ಡಿ.ಸಿ.ಬಿಲ್ಲನ್ನು ಕಳುಹಿಸತಕ್ಕದ್ದು, ಅಲ್ಲದೆ ಲೆಕ್ಕ ಪತ್ರಗಳನ್ನು ಪೂರ್ಣಗೊಳಿಸಿ, ಕರ್ನಾಟಕ ಆರ್ಥಿಕ ಸಂಹಿತೆಯಲ್ಲಿನ 62(ಬಿ) ನಮೂನೆಯ ವಿವರ ಪತ್ರವನ್ನು ಸರ್ಕಾರಕ್ಕೆ ಒಂದು ತಿಂಗಳೊಳಗಾಗಿ ತಪ್ಪದೇ ಕಳುಹಿಸತಕ್ಕದ್ದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

Join Whatsapp
Exit mobile version