ಬೆಂಗಳೂರು: ಬಿ.ಟಿ.ಎಂ.ವಿಧಾನಸಭಾ ಕ್ಷೇತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಮತ್ತು ಬಿ.ಟಿ.ಎಂ. ಕ್ಷೇತ್ರದ 24 ಸರ್ಕಾರಿ ಶಾಲೆಗಳು ಅಭಿವೃದ್ಧಿ ಪಡಿಸಿರುವುದನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಮುಖ್ಯ ಸಲಹೆಗಾರರಾದ ಪ್ರೊಫೆಸರ್ ದೊರೆಸ್ವಾಮಿರವರು ಮತ್ತು ಕೆ.ಪಿ.ಸಿ.ಕಾರ್ಯಾಧ್ಯಕ್ಷ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಇಂದು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಮಾತನಾಡಿ, ಸಮಾಜದಲ್ಲಿ ವಿದ್ಯಾವಂತರಿಗೆ ಮಾತ್ರ ಗೌರವ ಸಿಗುತ್ತದೆ, ಪ್ರತಿಯೊಂದು ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು, ಶ್ರೀಮಂತರ ಕುಟುಂಬದ ಮಕ್ಕಳಿಗೆ ಸಿಗುವ ಉನ್ನತ ಶಿಕ್ಷಣ, ಸರ್ಕಾರಿ ಶಾಲೆಯ ಮಕ್ಕಳಿಗೆ ಲಭಿಸಬೇಕು ಎಂಬ ಉದ್ದೇಶದಿಂದ ಬಿ.ಟಿ.ಎಂ.ವಿಧಾನಸಭಾ ಕ್ಷೇತ್ರದ 24 ಸರ್ಕಾರಿ ಶಾಲೆಯನ್ನು ನವೀಕರಣ ಜೊತೆಯಲ್ಲಿ ಆಧುನೀಕರಣ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಂದು ಮೂರು ಶಾಲೆಯ ವೀಕ್ಷಿಸಲಾಯಿತು ಎಂದರು.
ಮಕ್ಕಳು ಕುಳಿತುಕೊಳ್ಳಲು ಬೆಂಚ್, ಬರೆಯಲು ಡೆಸ್ಕ್ ಮತ್ತು ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್ ಮತ್ತು ಉತ್ತಮ ಶೌಚಾಲಯ ವ್ಯವಸ್ಥೆ, ಆಟದ ಮೈದಾನ ನವೀಕರಣ ಮಾಡಲಾಗಿದೆ. ಮಕ್ಕಳ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಗಳಿಸಿ, ರಾಜ್ಯ, ರಾಷ್ಟ್ರಕ್ಕೆ ಉತ್ತಮ ಪ್ರಜೆಯಾಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಪ್ರೊಫೆಸರ್ ದೊರೆಸ್ವಾಮಿ ಮಾತನಾಡಿ, ಶಿಕ್ಷಣದಲ್ಲಿ ಅಭಿವೃದ್ದಿಯಾಗಬೇಕಾದರೆ ಸರ್ಕಾರದ ಜೊತೆಯಲ್ಲಿ ಖಾಸಗಿ ಸಂಸ್ಥೆಗಳು ಸಹಕಾರ ನೀಡಬೇಕು ಆಗ ಬದಲಾವಣೆ ತರಲು ಸಾಧ್ಯ. ರಾಮಲಿಂಗಾರೆಡ್ಡಿರವರು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿಯಿಂದ ತಮ್ಮ ಕ್ಷೇತ್ರದಲ್ಲಿ ಇರುವ ಸರ್ಕಾರಿ ಶಾಲೆಗಳನ್ನು ಮಾದರಿ ಹೈಟೆಕ್ ಶಾಲೆಗಳಾಗಿ ನಿರ್ಮಿಸಿದ್ದಾರೆ ಎಂದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮಾಜಿ ಮಹಾಪೌರರು ಮಂಜುನಾಥ ರೆಡ್ಡಿ, ಮಂಜುನಾಥ್, ಬೈರಸಂದ್ರ ನಾಗರಾಜ್. ಚಂದ್ರಪ್ಪ, ಬ್ಲಾಕ್ ಅಧ್ಯಕ್ಷರಾದ ಗೋವರ್ಧನ್ ರೆಡ್ಡಿ ಹಾಗೂ ಆನಂದ್ ಮತ್ತು ಹಲವಾರು ಮುಖಂಡರು ಉಪಸ್ಥಿತರಿದ್ದರು.