ತಿರುವನಂತಪುರಂ : ತನ್ನ ಪತ್ನಿ ಇಸ್ಲಾಂಗೆ ಮತಾಂತರ ಹೊಂದಿದ ಬಗ್ಗೆ ದೂರಿದ್ದಕ್ಕೆ ತನ್ನನ್ನು ಸಿಪಿಎಂನಿಂದ ವಜಾ ಮಾಡಲಾಗಿದೆ ಎಂದು ಪಕ್ಷದ ಸದಸ್ಯರೊಬ್ಬರು ಆಪಾದಿಸಿದ್ದಾರೆ. ಆದಾಗ್ಯೂ, ಪಕ್ಷದ ಮೂಲಗಳು ಈ ಆರೋಪಗಳನ್ನು ತಳ್ಳಿ ಹಾಕಿವೆ.
ಪಕ್ಷದ ಇಬ್ಬರು ಸದಸ್ಯರು ತನ್ನ ಅನುಪಸ್ಥಿತಿಯಲ್ಲಿ ಪತ್ನಿಯನ್ನು ಕರೆದು, ಇಸ್ಲಾಂಗೆ ಮತಾಂತರ ಮಾಡಲು ಒತ್ತಾಯಿಸಿದ್ದಾರೆ ಎಂದು ಸಿಪಿಎಂ ಸದಸ್ಯ ಪಿ.ಟಿ. ಗಿಲ್ಬರ್ಟ್ ಆಪಾದಿಸಿದ್ದಾನೆ. ಜೂ.9ರಂದು ಪತ್ನಿ ಮನೆಬಿಟ್ಟು ಹೋಗಿದ್ದಳು. ಈ ಬಗ್ಗೆ ಪಕ್ಷದ ಯಾರೂ ತನಗೆ ಸಹಾಯ ಮಾಡಿಲ್ಲ ಎಂದು ಅವರು ಆಪಾದಿಸಿದ್ದಾರೆ.
ಪಕ್ಷದ ಮುಖಂಡರು ಪೊಲೀಸ್ ದೂರು ನೀಡಲೂ ತನ್ನೊಂದಿಗೆ ಬರಲಿಲ್ಲ. ತನ್ನನ್ನು ಪಕ್ಷದಿಂದ ವಜಾ ಮಾಡುವ ಬಗ್ಗೆಯೂ ತಿಳಿಸಿಲ್ಲ. ಪಕ್ಷದ ಪತ್ರಿಕೆಯಿಂದಷ್ಟೇ ತಿಳಿಯಿತು ಎಂದು ಗಿಲ್ಬರ್ಟ್ ದೂರಿದ್ದಾರೆ.
ಆದರೆ, ಈ ಆರೋಪಗಳನ್ನು ಮಲಪ್ಪುರಂ ಸಿಪಿಎಂ ಜಿಲ್ಲಾ ಸಮಿತಿ ತಳ್ಳಿ ಹಾಕಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಆತನನ್ನು ವಜಾ ಮಾಡಲಾಗಿದೆ. ಅವರು ಮಾಡಿದ ಆರೋಪಗಳೆಲ್ಲಾ ಸುಳ್ಳು ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನೊಂದೆಡೆ, ದೆನ್ಹಿಪಾಲಂ ಪೊಲೀಸರ ಪ್ರಕಾರ, ಈ ದೂರು ಒಂದು ರೀತಿಯಲ್ಲಿ ನಕಲಿ ಎಂದು ಹೇಳಲಾಗಿದೆ. ಮತಾಂತರಗೊಂಡಿದ್ದಾರೆ ಎನ್ನಲಾದ ಮಹಿಳೆ ಗಿಲ್ಬರ್ಟ್ ರ ಪತ್ನಿಯೇ ಅಲ್ಲ. ಅವರ ಪತ್ನಿಯ ಸಹೋದರಿ ಮತ್ತು ಆಕೆಗೆ 13 ವರ್ಷದ ಮಗನಿದ್ದಾನೆ. ಜೂ.9ರಂದು ಆಕೆ ಮನೆಬಿಟ್ಟು ಹೋದ ಬಳಿಕ, ಗಿಲ್ಬರ್ಟ್ ನಾಪತ್ತೆ ದೂರು ದಾಖಲಿಸಿದ್ದರು.
ಬಳಿಕ ಆಕೆಯನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ಆಕೆಯ ಹೇಳಿಕೆ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇಸ್ಲಾಮ್ ಕಲಿಯಬೇಕೆಂಬುದು ತನ್ನ ಸ್ವಂತ ಇಚ್ಛೆ ಎಂದು ಮಹಿಳೆ ಕೋರ್ಟ್ ಗೆ ತಿಳಿಸಿದ್ದಾರೆ. ಗಿಲ್ಬರ್ಟ್ ತನಗೆ ಯಾವತ್ತೂ ರಕ್ಷಣೆ ನೀಡಿಲ್ಲ, ತನಗೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಕೋರ್ಟ್ ಗೆ ತಿಳಿಸಿದ್ದಾರೆ.
ಕೋರ್ಟ್ ಹೇಳಿಕೆ ದಾಖಲಾದ ಬಳಿಕ, ಆಕೆಯನ್ನು ಕೋಝಿಕ್ಕೋಡ್ ಗೆ ಹಿಂದಿರುಗಲು ಅನುಮತಿ ನೀಡಲಾಗಿದೆ. 13 ವರ್ಷದ ಮಗನ ಬಯಕೆಯಂತೆ ಆತನನ್ನು ತಾಯಿಯ ಜೊತೆ ಇರಲು ಅನುಮತಿಸಲಾಗಿದೆ. ಮಗನನ್ನು ತಾನು ಮತಾಂತರ ಮಾಡುವುದಿಲ್ಲ ಎಂದು ಮಹಿಳೆ ಕೋರ್ಟ್ ಗೆ ತಿಳಿಸಿದ್ದಾರೆ.