Home ಟಾಪ್ ಸುದ್ದಿಗಳು ಸರ್ಕಾರಿ ನೌಕರರಿಗೆ RSS ನಿಷೇಧ ತೆರವು ಅತ್ಯಂತ ಅಪಾಯಕಾರಿ: ಸಚಿವ ಡಾ.ಹೆಚ್.ಸಿ. ಮಹದೇವಪ್ಪ

ಸರ್ಕಾರಿ ನೌಕರರಿಗೆ RSS ನಿಷೇಧ ತೆರವು ಅತ್ಯಂತ ಅಪಾಯಕಾರಿ: ಸಚಿವ ಡಾ.ಹೆಚ್.ಸಿ. ಮಹದೇವಪ್ಪ

ಮೈಸೂರು: ಯಾರೋ ಕೆಲವು ಮನುವಾದಿಗಳನ್ನು ಮೆಚ್ಚಿಸಲು ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಶಾಖೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳುತ್ತಿರುವ ಕೇಂದ್ರ ಸರ್ಕಾರದ ನಿಲುವು ಅತ್ಯಂತ ಅಪಾಯಕಾರಿಯಾದ ನಡೆಯಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಆಳವಾಗಿ ಅಳವಡಿಸಿಕೊಂಡು, ಎಲ್ಲರನ್ನೂ ಕಾಪಾಡುವ ಸಂವಿಧಾನದ ರೀತಿ ನೀತಿಗಳನ್ನು ಗಾಳಿಗೆ ತೂರಿ ಜೀವಿಸಲು ಇಚ್ಛಿಸುವ ಆರ್.ಎಸ್.ಎಸ್ ಜೊತೆಗೆ ಸಂವಿಧಾನದ ಸೇವಕರಾಗಿ ಕೆಲಸ ಮಾಡುವ ನೌಕರರು ಭಾಗವಹಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ಕೂಡಲೇ ತಮ್ಮ ಈ ನಿರ್ಧಾರವನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರ ಎಂಬುದು ಸದಾ ನ್ಯಾಯ ಪ್ರಜ್ಞೆಯನ್ನು ಇಟ್ಟುಕೊಂಡು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಪ್ರಜಾಪ್ರಭುತ್ವದ ಆಶಯಕ್ಕೆ ಅನುಸಾರವಾಗಿ ಕೆಲಸ ಮಾಡಬೇಕು. ಸರ್ಕಾರದ ಭಾಗವಾಗಿ ಕೆಲಸ ಮಾಡುವ ಸರ್ಕಾರಿ ನೌಕರರೂ ಪ್ರಜಾಪ್ರಭುತ್ವದ ಈ ಪ್ರಕ್ರಿಯೆಯ ಭಾಗವಾಗಿರುತ್ತಾರೆ. ಹೀಗಿರುವಾಗ ನೀವು ಇಂತದ್ದೇ ತಿನ್ನಬೇಕು, ಇಂತಹದ್ದೇ ಉಡುಪು ಧರಿಸಬೇಕು, ಹೀಗೇ ಬದುಕಬೇಕು ಮತ್ತು ನಾವು ಹೇಳುವ ರೀತಿಯಲ್ಲೇ ಬದುಕಬೇಕು ಎಂದು ಮೂಢ ನಂಬಿಕೆ ಮತ್ತು ಅವೈಜ್ಞಾನಿಕತೆಯನ್ನೇ ಉಸಿರಾಡುವ ಆರ್.ಎಸ್.ಎಸ್. ಚಟುವಟಿಕೆಗಳಲ್ಲಿ, ತಟಸ್ತವಾಗಿ, ಯಾವುದೇ ಸಾಮಾಜಿಕ ಮತ್ತು ಸೈದ್ಧಾಂತಿಕ ಪೂರ್ವಗ್ರಹ ಇಲ್ಲದೇ ಕೆಲಸ ಮಾಡುವ ಸಾಂವಿಧಾನಿಕ ಜವಾಬ್ದಾರಿ ಹೊತ್ತಿರುವ ಸರ್ಕಾರಿ ನೌಕರರು ಭಾಗವಹಿಸುವುದು ಯಾವ ರೀತಿಯಲ್ಲೂ ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

Join Whatsapp
Exit mobile version