Home ಜಾಲತಾಣದಿಂದ ಕೋಮುವಾದೀಕರಣವು ಭಾರತದ ಐಟಿ ನಾಯಕತ್ವವನ್ನು ನಾಶಪಡಿಸುತ್ತದೆ: ಮಜುಂದಾರ್ ಶಾ ಎಚ್ಚರಿಕೆ

ಕೋಮುವಾದೀಕರಣವು ಭಾರತದ ಐಟಿ ನಾಯಕತ್ವವನ್ನು ನಾಶಪಡಿಸುತ್ತದೆ: ಮಜುಂದಾರ್ ಶಾ ಎಚ್ಚರಿಕೆ

►“ದಯವಿಟ್ಟು ಈಗ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ”

ಬೆಂಗಳೂರು: “ಐಟಿ-ಬಿಟಿ ಕ್ಷೇತ್ರವೇನಾದರೂ ಕೋಮುವಾದೀಕರಣಗೊಂಡರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಖ್ಯಾತ ಉದ್ಯಮಿ, ಪದ್ಮಭೂಷಣ ಪುರಸ್ಕೃತೆ ಬಯೋಕಾನ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಎಚ್ಚರಿಸಿದ್ದಾರೆ.

ಹಿಂದೂ ದೇವಾಲಯದ ಆವರಣ ಹಾಗೂ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರಿರುವ ಕುರಿತು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕಿವಿಮಾತು ಹೇಳಿದ್ದಾರೆ.

“ಕರ್ನಾಟಕ ರಾಜ್ಯವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ರೂಪಿಸುತ್ತದೆ. ಕೋಮುವಾದ ಪ್ರೇರಿತ ನಿಷೇಧಕ್ಕೆ ಅವಕಾಶ ನೀಡಬಾರದು. ಐಟಿ-ಬಿಟಿ ಕ್ಷೇತ್ರವೇನಾದರೂ ಕೋಮುವಾದೀಕರಣಗೊಂಡರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಕಿರಣ್ ಮಜುಂದಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಟ್ವೀಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿರುವ ಅವರು, “ದಯವಿಟ್ಟು ಈ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ” ಎಂದು ಒತ್ತಾಯಿಸಿದ್ದಾರೆ.

Join Whatsapp
Exit mobile version