Home ಕರಾವಳಿ ಕೊಲೆ ರಾಜಕಾರಣ ತಿರಸ್ಕರಿಸಿ, ಸೌಹಾರ್ದತೆ ಎತ್ತಿ ಹಿಡಿಯಿರಿ: ಡಿವೈಎಫ್ ಐ ಮನವಿ

ಕೊಲೆ ರಾಜಕಾರಣ ತಿರಸ್ಕರಿಸಿ, ಸೌಹಾರ್ದತೆ ಎತ್ತಿ ಹಿಡಿಯಿರಿ: ಡಿವೈಎಫ್ ಐ ಮನವಿ

ಮಂಗಳೂರು: ಬೆಳ್ಳಾರೆಯಲ್ಲಿ ನಡೆದ ಎರಡು ಕೊಲೆಗಳ ಬೆನ್ನಿಗೆ ಸುರತ್ಕಲ್ ನಲ್ಲಿ ಅಮಾಯಕ ಯುವಕ ಮುಹಮ್ಮದ್ ಫಾಝಿಲ್ ಕೊಲೆ ನಡೆದಿರುವುದು ನಾಡಿನ ಕೋಮು ಸೌಹಾರ್ದಕ್ಕೆ ದೊಡ್ಡ ಬೆದರಿಕೆ ಒಡ್ಡಿದೆ. ಇಂತಹ ಆತಂಕಕಾರಿ ಬೆಳವಣಿಗೆಗಳಿಗೆ ಬಿಜೆಪಿ ಸರಕಾರ ನೇರ ಹೊಣೆಯಾಗಿದೆ. ಜನಾಮಾನ್ಯರ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕೊಲೆ ರಾಜಕಾರಣವನ್ನು ಜನತೆ ಒಕ್ಕೊರಲಿನಿಂದ ತಿರಸ್ಕರಿಸಬೇಕು. ಮತ ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕು ಎಂದು ಡಿವೈಎಫ್ ಐ ಕರ್ನಾಟಕ ರಾಜ್ಯ ಸಮಿತಿ ಜನತೆಯಲ್ಲಿ ಮನವಿ ಮಾಡಿದೆ.

ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ತನ್ನ ಎಂದಿನ ಚಾಳಿಯಂತೆ ಸರಕಾರದ ಬೆಂಬಲದೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಮತೀಯ ಹಿಂಸೆಯನ್ನು ಪ್ರಚೋದಿಸುತ್ತಿದೆ. ಆ ಮೂಲಕ ಧರ್ಮಾಧಾರಿತ ಧ್ರುವೀಕರಣ ನಡೆಸುವುದು, ಸರಕಾರದ ವಿರುದ್ಧ ಎದ್ದಿರುವ ಜನಾಭಿಪ್ರಾಯದ ದಿಕ್ಕು ತಪ್ಪಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಈ ಕಾರಣದಿಂದಲೆ ಕರಾವಳಿಯಲ್ಲಿ ಸರಣಿ ಕೊಲೆಗಳು ನಡೆಯುತ್ತಿದೆ ಎಂದು ಡಿವೈಎಫ್ ಐ ಆಪಾದಿಸಿದೆ.

ರಾಜ ಧರ್ಮ ಪಾಲಿಸಿದ್ದರೆ ಫಾಝಿಲ್ ಹತ್ಯೆ ನಡೆಯುತ್ತಿರಲಿಲ್ಲ. ಬೆಳ್ಳಾರೆಯಲ್ಲಿ ಕೊಲೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಯಾರು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಸರಕಾರದ ವತಿಯಿಂದ ಪರಿಹಾರ ಧನ ವಿತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೇ ಗ್ರಾಮದಲ್ಲಿ ಹತ್ಯೆ ಗೀಡಾದ ಮುಹಮ್ಮದ್ ಮಸೂದ್ ಮನೆಗೆ ಭೇಟಿ ನೀಡದಿರುವುದು, ಪರಿಹಾರ ಧನ ನೀಡದಿರುವುದು ಅತ್ಯಂತ ಕೆಟ್ಟ ನಡವಳಿಕೆ. ಮುಖ್ಯಮಂತ್ರಿಯಾದವರು ಈ ರೀತಿ ನಿರ್ಲಜ್ಜ ತಾರತಮ್ಯ ಎಸಗುವುದು ಅಕ್ಷಮ್ಯ. ಈ ನಡವಳಿಕೆಯೇ ಫಾಝಿಲ್ ಕೊಲೆಗೆ ಪ್ರೇರಣೆ ಒದಗಿಸಿದೆ. ಮುಖ್ಯಮಂತ್ರಿಗಳು ರಾಜಧರ್ಮ ಪಾಲಿಸಿದ್ದರೆ ಕರಾವಳಿಯ ಪ್ರಕ್ಷುಬ್ದತೆ ಒಂದಿಷ್ಟು ಶಮನವಾಗುತ್ತಿತ್ತು ಎಂದು ಹೇಳಿರುವ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ನರಗುಂದದ ಸಮೀರ್ ನಿಂದ ಹಿಡಿದು ಸುರತ್ಕಲ್ ನ ಫಾಝಿಲ್ ಕುಟುಂಬದ ವರಗೆ ತಾರತಮ್ಯ ವಿಲ್ಲದೆ ಪರಿಹಾರ ಧನ ಒದಗಿಸಬೇಕು ಎಂದು ಎಂದು ಡಿವೈಎಫ್ ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Join Whatsapp
Exit mobile version