Home ಕರಾವಳಿ ಮಂಗಳೂರು | ಕ್ರಿಮಿನಲ್ ವಿದ್ಯಾರ್ಥಿಯ ನಾಮಪತ್ರ ತಿರಸ್ಕರಿಸಿ : ವಿವಿ ಕಾಲೇಜು ವಿದ್ಯಾರ್ಥಿಗಳಿಂದ ಆಗ್ರಹ

ಮಂಗಳೂರು | ಕ್ರಿಮಿನಲ್ ವಿದ್ಯಾರ್ಥಿಯ ನಾಮಪತ್ರ ತಿರಸ್ಕರಿಸಿ : ವಿವಿ ಕಾಲೇಜು ವಿದ್ಯಾರ್ಥಿಗಳಿಂದ ಆಗ್ರಹ

►ಕ್ರಿಮಿನಲ್ ಕೇಸ್ ಆರೋಪಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ‌ ಸ್ಪರ್ಧೆ

►ನಿಯಮ ಉಲ್ಲಂಘನೆ ಆರೋಪ. ನಾಮಪತ್ರ ತಿರಸ್ಕರಿಸಲು ಮನವಿ

ಮಂಗಳೂರು : ಜನವರಿ 6ರಂದು ನಡೆಯಲಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ವಿವಾದಕ್ಕೀಡಾಗಿದೆ.

ಅಪರಾಧ ಹಿನ್ನೆಲೆಯ ವಿದ್ಯಾರ್ಥಿ, ಎಬಿವಿಪಿಯ ಪ್ರಜನ್ ವಿ ಶೆಟ್ಟಿ ಎಂಬವರು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿರುವುದಕ್ಕೆ ತೀವ್ರ ಅಪಸ್ವರ ಕೇಳಿಬಂದಿದೆ. ಎಬಿವಿಪಿ‌ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯ ನಿಯಮಾವಳಿಗಳ ಪ್ರಕಾರ ಅಪರಾಧ ಹಿನ್ನೆಲೆಯ ವಿದ್ಯಾರ್ಥಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ನಿಯಮಾವಳಿಗಳ ‘ಪ್ಯಾರ ಡಿ’ (ಕೈ ಪಿಡಿ ಪುಟ ಸಂಖ್ಯೆ 5) ಇಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿದ್ಯಾರ್ಥಿ, ‘ಈ ಹಿಂದೆ  ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಕೂಡದು’ ಎಂದು ನಮೂದಿಸಲಾಗಿದೆ. ಎವಿಬಿಪಿಯ ಆದ್ಯಕ್ಷೀಯ ಅಭ್ಯರ್ಥಿಯಾಗಿರುವ ಪ್ರಜನ್ ವಿ ಶೆಟ್ಟಿ ವಿರುದ್ಧ ಕಳೆದ ವರ್ಷ ಜೂನ್ 10ರಂದು ಮಂಗಳೂರು ದಕ್ಷಿಣ ಠಾಣೆಯಲ್ಲಿ IPC 341, 323, 504, 506, 34 ಸೆಕ್ಷನ್ ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಚುನಾವಣೆಯ ನಿಯಮಾವಳಿಗಳ ಪ್ರಕಾರ ಕ್ರಿಮಿನಲ್ ಕೇಸ್ ಆರೋಪಿ‌ ಪ್ರಜನ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿ ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ನಿಯಮಾವಳಿಗಳನ್ನು ಉಲ್ಲಂಘಿಸಿ ಕ್ರಿಮಿನಲ್ ಹಿನ್ನೆಲೆಯ ವಿದ್ಯಾರ್ಥಿಯ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿರುವ ಚುನಾವಣೆ ಸಮಿತಿ ವಿರುದ್ಧವೂ ಕ್ರಮಕೈಗೊಳ್ಳುವಂತೆ ವಿವಿ ಕಾಲೇಜಿನ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಮನವಿಗೆ ಪ್ರಾಂಶುಪಾಲರು ಈವರೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ

ಕಾಲೇಜಿನಲ್ಲಿ ಉಂಟಾದ ಸಾವರ್ಕರ್ ಫ್ಲೆಕ್ಸ್ ವಿವಾದದ ಸಂಬಂಧ ಮುಸ್ಲಿಂ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ಪ್ರಜನ್ ಶೆಟ್ಟಿ A1 ಆರೋಪಿ ಎಂದು ತಿಳಿದುಬಂದಿದೆ.

Join Whatsapp
Exit mobile version