ಕೆ.ಆರ್.ಪುರಂ: ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಲು ಅವಕಾಶ ನಿರಾಕರಿಸುತ್ತಿರುವ ಅಸಾಂವಿಧಾನಿಕ ನಡೆಯ ವಿರುದ್ಧ ಬೆಂಗಳೂರಿನ ಕೆ. ಆರ್. ಪುರಂನಲ್ಲಿ ಸೋಮವಾರ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಲು ಅವಕಾಶ ನಿರಾಕರಿಸುತ್ತಿರುವ ಅಸಂವಿಧಾನಿಕ ನಡೆಯ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ 2021- 2022 ರ ಮಾರ್ಗ ಸೂಚಿಯ ಅನುಸಾರವಾಗಿ ಸಮವಸ್ತ್ರ ಕಡ್ಡಾಯವಾಗಿರುವುದಿಲ್ಲ ಹಾಗೂ ಸಮವಸ್ತ್ರವನ್ನು ಆಯಾ ಕಾಲೇಜಿನ ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರು ಕಡ್ಡಾಯಗೊಳಿಸಿದರೆ ಕಾನೂನುಬಾಹಿರವೆಂದು ಉಲ್ಲೇಖಿಸಿ ಸಮವಸ್ತ್ರ ಕಡ್ಡಾಯಗೊಳಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸುವ ಸೂಚನೆಯೂ ನೀಡಲಾಗಿತ್ತು. ಆದರೆ ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರದ ನೆಪವನ್ನಿಟ್ಟು ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆ ಶಿರವಸ್ತ್ರ ಧರಿಸಿದ್ದ ಏಕೈಕ ಕಾರಣಕ್ಕಾಗಿ ಸುಮಾರು ಒಂದು ತಿಂಗಳಿಂದ ತರಗತಿಗಳಿಗೆ ನಿರ್ಬಂಧಿಸಲಾಗಿದೆ.
ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಚರ್ಚೆಗಳು ಆಗಿವೆ. ಈ ರೀತಿ ನಡೆಯುವ ಸಂದರ್ಭದಲ್ಲಿಯೇ ಕುಂದಾಪುರ ಸರಕಾರಿ ಕಾಲೇಜಿನಲ್ಲೂ ಪ್ರಾಂಶುಪಾಲರು ಕಳೆದ ಹಲವು ದಿನಗಳಿಂದ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರನ್ನು ಗೇಟಿನ ಹೊರ ಹಾಕಿ ತರಗತಿಗೆ ಅವಕಾಶ ಕೊಡದೆ ಸುಡು ಬಿಸಿಲಿನ ಬೇಗೆಯಲ್ಲಿ ನಿಲ್ಲುವಂತ ಅಮಾನವೀಯವಾಗಿ ಮೆರೆದಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಇಸ್ಲಾಂ ಧರ್ಮದ ಧಾರ್ಮಿಕ ಮೂಲಭೂತ ತತ್ವಗಳ ಅನುಗುಣವಾಗಿ ಹೆಣ್ಣು ಶಿರವಸ್ತ್ರ ಧರಿಸುವುದು ಕಡ್ಡಾಯಗೊಳಿಸಿದೆ. ಸಂವಿಧಾನದ ಅನುಚ್ಛೇದ 25 , 26 ರ ಪ್ರಕಾರ ಧಾರ್ಮಿಕ ನಂಬಿಕೆಗಳ , ಅಚಾರಗಳ ಅನುಸರಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಆದುದರಿಂದ ಒಂದು ವೇಳೆ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಬಳಸಿ ಶಿರವಸ್ತ್ರ ಧರಿಸಲು ಅವಕಾಶ ನೀಡಬೇಕು, ಸಂವಿಧಾನಬದ್ಧವಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸಬೇಕೆಂದು ಆಗ್ರಹಿಸಿದರು.