ಬೆಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ಇಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ನಗರದ ರೇಸ್ ಕೋರ್ಸ್ ರಸ್ತೆಯ ತನ್ನ ಕೇಂದ್ರ ಕಚೇರಿಯಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ರೆಡ್ ಕ್ರಾಸ್ ಸಂಸ್ಥೆಯು ಮಾನವೀಯ ಸೇವಾ ಕಾರ್ಯಗಳ ಮೂಲಕ ಬಹಳಷ್ಟು ಜನರಿಗೆ ಸೇವೆ ನೀಡುತ್ತಿದೆ. ಈ ಸಂಸ್ಥೆಯ ಶತಮಾನೋತ್ಸವದ ಭಾಗವಾಗಿ ಈ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತಿರುವುದು ಅಂಚೆ ಇಲಾಖೆಗೆ ಸಂತಸ ತಂದಿದೆ ಎಂದರು.
ಕರ್ನಾಟಕ ರೆಡ್ ಕ್ರಾಸ್ ಶಾಖೆಯ ಸಭಾಪತಿ ಎಸ್. ನಾಗಣ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಎಲ್ಲಾ ಮಾನವೀಯ ಸೇವಾಕಾರ್ಯಗಳ ಜೊತೆಗೆ ಎಲ್ಲಾ ಸಮಯದಲ್ಲೂ ನಿರಂತರವಾಗಿ ತನ್ನ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ವಿಶೇಷವಾಗಿ ದಾನಿಗಳು ಹಾಗೂ ಸಂಸ್ಥೆಗಳ ಸಹಕಾರ ಅನನ್ಯ. ರೆಡ್ ಕ್ರಾಸ್ ಇತಿಹಾಸದಲ್ಲಿ ಈ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಹತ್ವದ್ದು ಎಂದರು.
ರೆಡ್ ಕ್ರಾಸ್ ರಾಷ್ಟ್ರೀಯ ಮಂಡಳಿಯ ಮಾಜಿ ಸದಸ್ಯ ಡಾ. ವೂಡೇ ಪಿ ಕೃಷ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಹಲವು ಸವಾಲುಗಳ ನಡುವೆ ಸಾಗಿ ಬಂದಿದೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್ ಗೆ ಜಗತ್ತಿನಾದ್ಯಂತ ವಿಶೇಷ ಮಹತ್ವ ಹಾಗೂ ಮನ್ನಣೆ ಇದೆ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಗೋಪಾಲ್ ಬಿ. ಹೊಸೂರ್ ಮಾತನಾಡಿ, ಕೋವಿಡ್-19 ಸಂದರ್ಭವಷ್ಟೇ ಅಲ್ಲದೇ ಇನ್ನಿತರ ಪ್ರವಾಹ ಹಾಗೂ ನೈಸರ್ಗಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ಉತ್ತಮವಾಗಿ ಕೆಲಸ ಮಾಡಿದೆ. ಇಲ್ಲಿನ ಸ್ವಯಂಸೇವಕರ ಪಾತ್ರ ಶ್ಲಾಘನೀಯ ಎಂದರು.
ಡಾ. ಕುಮಾರ್ ವಿ.ಎಲ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ್ ಎಸ್. ಜಿಗಜಿನ್ನಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಹಿಮಾಂಶು ಚೌದ್ರಿ, ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯರು, ಸ್ವಯಂಸೇವಕರು ಭಾಗವಹಿಸಿದ್ದರು.